ಚೆನ್ನೈ: ದಕ್ಷಿಣ ಆಫ್ರಿಕಾದ ತಂಡದ ಕಳೆದ ಸೀಸನ್ ನಲ್ಲಿ ಆರ್ ಸಿಬಿ ಪರ ಆಡಿದ್ದ ಆಲ್ ರೌಂಡರ್ ಕ್ರಿಸ್ ಮೊರಿಸ್ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.
75 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಮೊರಿಸ್ ಖರೀದಿಗೆ ತಂಡಗಳು ಮುಗಿಬಿದ್ದವು. ಮುಂಬೈ ಇಂಡಿಯನ್ಸ್, ಆರ್ ಸಿಬಿ, ಚೆನ್ನೈ, ಪಂಜಾಬ್ ತಂಡ ಗಳು ಆರಂಭದಲ್ಲಿ ಭಾರಿ ಪೈಪೋಟಿ ನಡೆಸಿದರು. ಕೊನೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಮೊರಿಸ್ ರನ್ನು ದಾಖಲೆಯ 16.25 ಕೋಟಿ ರೂ. ಬೆಲೆ ನೀಡಿ ಖರೀದಿಸುವಲ್ಲಿ ಸಫಲವಾಯಿತು.
ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬ ಗಳಿಸಿದ ಅತೀ ಹೆಚ್ಚು ಮೊತ್ತ. 2015ರಲ್ಲಿ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ತಂಡ 16 ಕೋಟಿ ರೂ. ನೀಡಿ ಖರೀದಿಸಿತ್ತು. 2020ರಲ್ಲಿ ಪ್ಯಾಟ್ ಕಮಿನ್ಸ್ ಅವರಿಗೆ ಕೆಕೆಆರ್ ತಂಡ 15.5 ಕೋಟಿ ರೂ ನೀಡಿತ್ತು. ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ಆರ್ ಸಿಬಿ ತಂಡ 14.25 ಕೋಟಿ ರೂ. ಕೊಟ್ಟು ಖರೀದಿಸಿತು. ಶಿವಂ ದುಬೆ ಅವರಿಗೆ ರಾಜಸ್ಥಾನ ತಂಡ 4.4 ಕೋಟಿ ರೂ. ನೀಡಿತು. ಡೇವಿಡ್ ಮಲಾನ್ ಅವರನ್ನು ಪಂಜಾಬ್ ತಂಡ 1.5 ಕೋಟಿ ರೂ. ನೀಡಿ ಖರೀದಿ ಸಿತು.
ಆಲ್ ರೌಂಡರ್ ಮೊಯಿನ್ ಅಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ಕೋಟಿ ರೂ. ಗೆ ಖರೀದಿಸಿತು. ಶಕೀಬ್ ಅಲ್ ಹಸನ್ 3.2 ಕೋಟಿ. ರೂ ಗೆ ಕೆಕೆಆರ್ ತಂಡಕ್ಕೆ ಸೇರ್ಪಡೆಯಾದರು. ಸ್ಟೀವ್ ಸ್ಮಿತ್ ಅವರನ್ನು 2.20 ಕೋಟಿ ರೂ. ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು.