ನವದೆಹಲಿ: ಶಾಲೆಯಿಂದ ಛೀಮಾರಿ ಹಾಕಿದ್ದ ಕಾರಣ ಶಾಲೆಯ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಂದ ದರ್ಘಟನೆ ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರದಲ್ಲಿ ನಡೆದಿದೆ. ಧಮೋರಾದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 12ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನದೇ ಶಾಲೆಯ ಪ್ರಾಂಶುಪಾಲರ ತಲೆಗೆ ಗುಂಡು ಹಾರಿಸಿ ಕೊಂದು ಹಾಕಿ ಸಂಚಲನ ಮೂಡಿಸಿದ್ದಾನೆ.
ಪದೇ-ಪದೆ ಶಾಲೆಗೆ ಗೈರು ಹಾಜರಾಗಿದ್ದಕ್ಕೆ ಆರೋಪಿ ವಿದ್ಯಾರ್ಥಿಗೆ ಪ್ರಾಂಶುಪಾಲರು ಛೀಮಾರಿ ಹಾಕಿದ್ದರು. ಇದರಿಂದ ಮನನೊಂದ ಅಪ್ರಾಪ್ತ ವಿದ್ಯಾರ್ಥಿಯು ಕಂಟ್ರಿಮೇಡ್ ಪಿಸ್ತೂಲ್‌ನೊಂದಿಗೆ ಶಾಲೆಗೆ ನುಗ್ಗಿ ಶೌಚಾಲಯದಲ್ಲಿ ನಿಂತಿದ್ದ ಪ್ರಾಂಶುಪಾಲರ ತಲೆಗೆ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿದ ತಕ್ಷಣ ಪ್ರಾಂಶುಪಾಲರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಶಾಲಾ ಪ್ರಾಂಶುಪಾಲರಾದ ಸುರೇಂದ್ರ ಕುಮಾರ್ ಸಕ್ಸೇನಾರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಭಾರೀ ಪೊಲೀಸ್ ಪಡೆ ಸ್ಥಳಕ್ಕೆ ಆಗಮಿಸಿ ಘಟನೆಯನ್ನು ಪರಿಶೀಲನೆ ನಡೆಸಿತು. ಘಟನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳಿಂದ ಎಸ್‌ಪಿ ಮಾಹಿತಿ ಸಂಗ್ರಹಿಸಿದರು. ಓರ್ಚಾ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಧಮೋರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಪ್ರಿನ್ಸಿಪಾಲ್ ಕೊಲೆ ಪ್ರಕರಣದ ಆರೋಪಿಗಳ ಕೃತ್ಯ ಸೆರೆಯಾಗಿದೆ.
ವಿಡಿಯೊದಲ್ಲಿ ಆರೋಪಿಗಳು ಶಾಲೆಯಿಂದ ಓಡಿ ಹೋಗುತ್ತಿರುವುದು ಕಂಡು ಬಂದಿದೆ. ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರ ಹತ್ಯೆ ಪ್ರಕರಣದ ಪ್ರಮುಖ ಅಪ್ರಾಪ್ತ ಆರೋಪಿಯನ್ನು ಪೊಲೀಸ್ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಆರೋಪಿ ವಿದ್ಯಾರ್ಥಿಯು ಗೂಂಡಾ ಸ್ವಭಾವದವನೆಂದು ಶಾಲೆಯ ಶಿಕ್ಷಕರು ತಿಳಿಸಿದ ನಂತರ ಆರೋಪಿ ವಿದ್ಯಾರ್ಥಿಯು ಪ್ರಾಂಶುಪಾಲರ ಸ್ಕೂಟರ್ ಸಮೇತ ಪರಾರಿಯಾಗಿದ್ದಾನೆ. ಶಾಲೆಯಲ್ಲಿ ವಾದ ಮಾಡುತ್ತಿದ್ದ ಹಾಗೂ ನಿರಂತರವಾಗಿ ಶಾಲೆಗೆ ಗೈರುಹಾಜರಾಗಿದ್ದರಿಂದ ಅವನ ತಂದೆ ಮತ್ತು ಸಹೋದರನಿಗೆ ದೂರು ನೀಡಲಾಗಿತ್ತು.
ಎಸ್‌ಪಿ ಆಗಮ್ ಜೈನ್ ಮಾತನಾಡಿ, “ಧಮೋರಾ ಹೈಯರ್ ಸೆಕೆಂಡರಿ ಶಾಲೆಯ ಶೌಚಾಲಯದ ಪ್ರವೇಶ ದ್ವಾರದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಪ್ರಾಂಶುಪಾಲರಾದ ಎಸ್ ಕೆ ಸಕ್ಸೇನಾ ಅವರ ತಲೆಗೆ ಗುಂಡು ಹಾರಿಸಲಾಗಿದೆ. ಸಕ್ಸೇನಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಆರೋಪಿ ವಿದ್ಯಾರ್ಥಿ ಮತ್ತು ಆತನ ಸ್ನೇಹಿತ ಇದೇ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಕಳೆದ ಐದು ವರ್ಷಗಳಿಂದ ಮೃತ ಸಕ್ಸೇನಾ ಧಾಮೋರಾ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದರು.