ಡೆಹ್ರಾಡೂನ್; ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಹಲವೆಡೆಗಳಲ್ಲಿ ಭೂಕುಸಿತವುಂಟಾಗಿದ್ದು, ಮಳೆ ಅವಘಡದಲ್ಲಿ ಐದಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಮೇಘಸ್ಫೋಟದಿಂದ ತತ್ತರಿಸಿದ್ದು, ಬದರಿನಾಥ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತಕ್ಕೆ ಯಾತ್ರಿಗಳ ವಾಹನ ಲಂಬಗಡ ಚರಂಡಿಯಲ್ಲಿ ಸಿಲುಕಿ ಕೊಂಡ ಘಟನೆ ನಡೆದಿದೆ. ಚರಂಡಿಯಲ್ಲಿ ಸಿಲುಕಿದ್ದ ವಾಹನದಿಂದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಭೂ ಕುಸಿತದಿಂದಾಗಿ ರಿಷಿಕೇಶ-ಬದರಿನಾಥ ಹೆದ್ದಾರಿ ಬಂದ್ ಆಗಿದ್ದು, ಸಿರೋಬಗಡದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಖಂಖ್ರಾ-ಖೇಡಾಖಾಲ್-ಖಿರ್ಸು ಸಂಪರ್ಕ ರಸ್ತೆ ಕೂಡ ಭೂಕುಸಿತದಿಂದ ಹಾನಿಯಾಗಿದ್ದು, ಈ ರಸ್ತೆ ಮಾರ್ಗ ಕೂಡ ಬಂದ್ ಆಗಿದೆ. ಮತ್ತೊಂದೆಡೆ ನೈನಿತಾಲ್ ಹಾಗೂ ಉಧಮ್ ಪುರ ನಗರವನ್ನು ಸಂಪರ್ಕಿಸುವ ಹಲದವನಿ ಸೇತುವೆ ಭಾರಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಉಭಯ ನಗರಗಳ ಸಂಪರ್ಕ ಕಡಿತಗೊಂಡಿದೆ.
ಭಾರಿ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಇನ್ನೊದೆಡೆ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.