Tuesday, 7th January 2025

Priyanka Gandhi: ಗೆದ್ದರೆ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ನುಣುಪಾಗಿಸುತ್ತೇನೆ; ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ನವದೆಹಲಿ: ದೆಹಲಿಯ(Delhi) ಕಲ್ಕಾಜಿ ಕ್ಷೇತ್ರದಲ್ಲಿ ಗೆದ್ದರೆ ಕ್ಷೇತ್ರದ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿ(Priyanka Gandhi) ಅವರ ಕೆನ್ನೆಯಂತೆ ನುಣುಪಾಗಿಸುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ರಮೇಶ್ ಬಿಧುರಿ(Ramesh Bidhuri) ವಿವಾದಕ್ಕೆ ಸಿಲುಕಿದ್ದಾರೆ(Controversy). ಅವರ ಹೇಳಿಕೆಗೆ ಕಾಂಗ್ರೆಸ್‌ ನಾಯಕರು ಕಿಡಿಕಾರಿದ್ದಾರೆ.

ರಮೇಶ್‌ ಬಿಧುರಿ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಬಿಜೆಪಿಯನ್ನು ಮಹಿಳಾ ವಿರೋಧಿ ಪಕ್ಷ ಎಂದು ಕರೆದಿದೆ. ಬಿಧುರಿ ಹೇಳಿಕೆಗಳು ನಾಚಿಕೆಗೇಡಿನದ್ದು ಮತ್ತು ಮಹಿಳೆಯರ ವಿಷಯದಲ್ಲಿ ಅವರ ಕೊಳಕು ಮನಃಸ್ಥಿತಿಯನ್ನು ಇದು ತೋರಿಸುತ್ತದೆ. ಇದು ಬಿಜೆಪಿಯ ನಿಜವಾದ ಮುಖ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಕಿಡಿಕಾರಿದ್ದಾರೆ.

ಈ ಕುರಿತು ರಮೇಶ್ ಬಿಧುರಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, “ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿ ಅವರ ಕೆನ್ನೆಯಂತೆ ನುಣುಪಾಗಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಅವರ ಮಾತಿನಲ್ಲಿ ಕೆಟ್ಟ ಉದ್ದೇಶವಿರಲಿಲ್ಲ ಎಂದಾದರೆ ನನ್ನ ಮಾತಿನಲ್ಲೂ ಇಲ್ಲ” ಎಂದರು. “ಇಂದು ಕಾಂಗ್ರೆಸ್ ಗೆ ನನ್ನ ಹೇಳಿಕೆಯಿಂದ ನೋವು ಉಂಟಾಗಿದ್ದರೆ ಅಂದು ಲಾಲು ಪ್ರಸಾದ್‌ ಹೇಮಾ ಅವರ ಬಗ್ಗೆ ನೀಡಿದ ಹೇಳಿಕೆ ಏನು? ಅವರು ಹೆಸರಾಂತ ನಾಯಕಿ. ಚಲನಚಿತ್ರಗಳ ಮೂಲಕ ಭಾರತಕ್ಕೆ ಕೀರ್ತಿ ತಂದವರು. ನನ್ನ ಹೇಳಿಕೆ ತಪ್ಪಾಗಿದ್ದರೆ ಲಾಲು ಪ್ರಸಾದ್ ಹೇಳಿಕೆಯೂ ತಪ್ಪು ಎಂದು ಬಿಧುರಿ ತಿಳಿಸಿದರು. ಕಾಂಗ್ರೆಸ್‌ನ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಬಿಧುರಿ “ಹೇಮಾ ಮಾಲಿನಿ ಮಹಿಳೆ ಅಲ್ಲವೇ? ಜೀವನದಲ್ಲಿ ಸಾಧನೆಗಳ ವಿಷಯಕ್ಕೆ ಬಂದಾಗ ಹೇಮಾ ಮಾಲಿನಿ ಪ್ರಿಯಾಂಕಾ ಗಾಂಧಿಗಿಂತ ಹೆಚ್ಚು ಶ್ರೇಷ್ಠರು” ಎಂದು ಹೇಳಿದರು.

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ರಮೇಶ್ ಬಿಧುರಿ ಬಿಜೆಪಿ ಅಭ್ಯರ್ಥಿಯಾಗಿದ್ದು, ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತು ಕಾಂಗ್ರೆಸ್‌ನ ಅಲ್ಕಾ ಲಾಂಬಾ ವಿರುದ್ಧ ಚುನಾವಣಾ ಕದನದಲ್ಲಿ ಕಣಕ್ಕಿಳಿದಿದ್ದಾರೆ.

ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ ಸ್ಪರ್ಧೆ

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್(Aravind Kejriwal) ವಿರುದ್ಧ ಮಾಜಿ ಸಂಸದ ಪರ್ವೇಶ್(Parvesh) ಸ್ಪರ್ಧಿಸಲಿದ್ದು, ಮುಖ್ಯಮಂತ್ರಿ ಅತಿಶಿ ಹೆಸರು ಘೋಷಣೆಯಾಗಿರುವ ಕಲ್ಕಾಜಿ ಕ್ಷೇತ್ರದಿಂದ ಮಾಜಿ ಸಂಸದ ರಮೇಶ್ ಬಿಧುರಿ ಅವರನ್ನು ಬಿಜೆಪಿ ಚುನಾವಣಾ ಕಣಕ್ಕಿಳಿಸಿದೆ. ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳಾದ ದುಶ್ಯಂತ್ ಕುಮಾರ್ ಗೌತಮ್ ಹಾಗೂ ಆಶಿಶ್ ಸೂದ್ ಅವರನ್ನು ಕ್ರಮವಾಗಿ ಕರೋಲ್ ಬಾಗ್ ಹಾಗೂ ಜನಕಪುರಿ ಕ್ಷೇತ್ರದಿಂದ, ಅರವಿಂದರ್ ಸಿಂಗ್ ಲವ್ಲಿ ಅವರನ್ನು ಗಾಂಧಿನಗರ, ಎಎಪಿ ಮಾಜಿ ನಾಯಕ ಕೈಲಾಶ್ ಗೆಹಲೋತ್‌ ಅವರನ್ನು ಬಿಜ್ವಾಸನ್‌ನಿಂದ ಸ್ಫರ್ಧೆಗೆ ಇಳಿಸಿದೆ. ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಅವರು ಮಾಳವೀಯ ನಗರದಿಂದ ಸ್ಪರ್ಧಿಸಲಿದ್ದಾರೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Abhijeet Bhattacharya : ಗಾಂಧಿ ಪಾಕಿಸ್ತಾನಕ್ಕೆ ರಾಷ್ಟ್ರಪಿತ, ಭಾರತಕ್ಕಲ್ಲ… ಮತ್ತೆ ತನ್ನ ನಾಲಿಗೆ ಹರಿಬಿಟ್ಟ ಗಾಯಕ

Leave a Reply

Your email address will not be published. Required fields are marked *