ಕೋಲ್ಕತಾ: ಈ ತಿಂಗಳು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ಉತ್ತರ ಹೊರವಲಯದಲ್ಲಿರುವ ನ್ಯೂ ಟೌನ್‌ನಲ್ಲಿ(New Town) ಜ್ಯೋತಿ ಬಸು ಸೆಂಟರ್ ಫಾರ್ ಸೋಶಿಯಲ್ ಸ್ಟಡೀಸ್ ಅಂಡ್ ರಿಸರ್ಚ್ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಾಂಗ್ಲಾದೇಶದ ಜನಪ್ರಿಯ ಗಾಯಕಿಯನ್ನು ಆಹ್ವಾನಿಸಲು ಸಿಪಿಐ(ಎಂ) (Communist Party of India (Marxist) ನಿರ್ಧರಿಸಿದ್ದು ಓ ಬಗ್ಗೆ ಭಾರೀ ವಿವಾದಗಳು ಹುಟ್ಟಿಕೊಂಡಿವೆ(Controversy).
ಜನವರಿ 17ರಿಂದ ಜನವರಿ 19ರವರೆಗೆ ಸಿಪಿಐ(ಎಂ)ನ ಪ್ರಮುಖ ಕೇಂದ್ರ ಸಮಿತಿ ಸಭೆಯು ನ್ಯೂ ಟೌನ್‌ನಲ್ಲಿ ನಿಗದಿಯಾಗಿದೆ. ಇದರಲ್ಲಿ ಸಿಪಿಐ(ಎಂ)ನ ರಾಷ್ಟ್ರೀಯ ಪೊಲಿಟ್‌ಬ್ಯೂರೋ ಸಂಯೋಜಕ ಪ್ರಕಾಶ್ ಕಾರಟ್ ಭಾಗವಹಿಸಲಿದ್ದಾರೆ. ಆ ಸಂದರ್ಭದಲ್ಲಿ, ಭಾರತೀಯ ಮಾರ್ಕ್ಸ್‌ವಾದಿ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ದಿವಂಗತ ಜ್ಯೋತಿ ಬಸು ಅವರ ಹೆಸರಿನ ಈ ಸಂಸ್ಥೆಯು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಅಲ್ಲಿ ಪಕ್ಷವು ಜನಪ್ರಿಯ ಬಾಂಗ್ಲಾದೇಶದ ಗಾಯಕಿ ರೆಜ್ವಾನಾ ಚೌಧರಿ ಬನ್ಯಾ ಅವರನ್ನು ಪ್ರದರ್ಶನಕ್ಕೆ ಆಹ್ವಾನಿಸಿದ್ದು, ಈ ಬಗ್ಗೆ ವಿವಾದದ ಕಿಡಿ ಹೊತ್ತಿಕೊಂಡಿದೆ. ಪ್ರತಿಪಕ್ಷಗಳು ಸಿಪಿಐ(ಎಂ) ಮೇಲೆ ಮುಗಿಬಿದ್ದಿವೆ.
ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಘೋಷಣೆಗಳು ನಿರಂತರವಾಗಿ ಕೇಳಿಬರುತ್ತಿರುವ ಸಂದರ್ಭದಲ್ಲಿ, ಆ ದೇಶದ ಕಲಾವಿದರನ್ನು ಆಹ್ವಾನಿಸುವ ನಿರ್ಧಾರವು ಸರಿಯಿಲ್ಲ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಪಕ್ಷದ ಮಾಜಿ ಲೋಕಸಭಾ ಸದಸ್ಯ ದಿಲೀಪ್ ಘೋಷ್ ಸಿಪಿಐ(ಎಂ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಭಾರತೀಯ ಕಮ್ಯುನಿಸ್ಟರಿಗೆ ದೇಶದಲ್ಲಿ ಯಾವುದೇ ಸಮರ್ಥ ಕಲಾವಿದರು ಸಿಗಲಿಲ್ಲವೇ ಎಂಬುದು ನನ್ನ ಪ್ರಶ್ನೆ. ಅಂತಹ ನಿರ್ಧಾರದ ಅಗತ್ಯವಿರಲಿಲ್ಲ” ಎಂದು ಘೋಷ್ ಹೇಳಿದರು.
ಕಳೆದ ವರ್ಷ ಏಪ್ರಿಲ್‌ನಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಬನ್ಯಾ ಅವರನ್ನು ಆಹ್ವಾನಿಸುವುದರ ಹಿಂದೆ ಸಿಪಿಐ(ಎಂ) ನಾಯಕತ್ವಕ್ಕೆ ತನ್ನದೇ ಆದ ತರ್ಕವಿದೆ ಎಂದು ಸಿಪಿಐ(ಎಂ) ಸದಸ್ಯರೊಬ್ಬರು ಹೇಳಿದ್ದಾರೆ. “ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ದೇಶದಲ್ಲಿ ಧಾರ್ಮಿಕ ವಿಭಜನೆಯನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಅವರ ಸಂಬಂಧವು ಸಾಂಪ್ರದಾಯಿಕವಾಗಿ ಭಾರತದೊಂದಿಗೆ ಸೌಹಾರ್ದಯುತವಾಗಿದೆ. ಸಾಂಸ್ಕೃತಿಕ ವಿನಿಮಯದ ಮೂಲಕ ಏಕತೆಯ ಮನೋಭಾವವನ್ನು ಕಾಪಾಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ” ಎಂದಿದ್ದಾರೆ.
ಕಳೆದ ತಿಂಗಳು ಪಶ್ಚಿಮ ಬಂಗಾಳದ ಪುರಸಭೆಯೊಂದು ಆಯೋಜಿಸಿದ್ದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬನ್ಯಾ ಭಾಗವಹಿಸುವಿಕೆಗೆ ಒಂದಷ್ಟು ಗುಂಪು ಆಕ್ಷೇಪಣೆಯನ್ನು ಎತ್ತಿದ್ದರಿಂದ ಇದೇ ರೀತಿಯ ವಿವಾದಗಳು ಹುಟ್ಟಿಕೊಂಡಿದ್ದವು.
ಈ ಸುದ್ದಿಯನ್ನೂ ಓದಿ:Allu Arjun: ಕಾಲ್ತುಳಿತ ಪ್ರಕರಣ; ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ ಷರತ್ತುಬದ್ಧ ಜಾಮೀನು