ನವದೆಹಲಿ: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಚೌತಿ ಹಬ್ಬಗಳ ಹಿನ್ನೆಲೆಯಲ್ಲಿ ಕರೋನಾ ನಿರ್ಬಂಧಗಳನ್ನು ಗುಜರಾತ್ ಸರ್ಕಾರ ಸಡಿಲಿಸಿದೆ.
ಈ ನಿರ್ಧಾರದ ಪ್ರಕಾರ, ರಾಜ್ಯದ ಎಂಟು ನಗರಗಳಲ್ಲಿ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ಸಮಯವನ್ನು ಸಡಿಲಿಸ ಲಾಗಿದೆ. ಮುಖ್ಯಮಂತ್ರಿ ವಿಜಯ್ ರುಪಾನಿ ನೇತೃತ್ವದ ಸಾಂಕ್ರಾಮಿಕ ಪರಿಸ್ಥಿತಿ ಕುರಿತ ರಾಜ್ಯಮಟ್ಟದ ಕೋರ್ ಕಮಿಟಿ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾತ್ರಿ ಕರ್ಫ್ಯೂವನ್ನು ಆ.30ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಅನುಕೂಲವಾಗುವಂತೆ ಮಧ್ಯರಾತ್ರಿ 1 ಗಂಟೆಗೆ ಮರುನಿಗದಿಪಡಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಸಾಂಪ್ರದಾಯಿಕ ಕೃಷ್ಣಾಷ್ಟಮಿ ಮೆರವಣಿಗೆಯನ್ನು ಸೀಮಿತ ಸದಸ್ಯರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಸಲು ಅನುಮತಿ ನೀಡಲಾಗಿದೆ.
ಚೌತಿ ಹಬ್ಬದ ಹಿನ್ನೆಲೆಯಲ್ಲಿ ಅಹ್ಮದಾಬಾದ್, ವಡೋದರ, ರಾಜಕೋಟ್, ಸೂರತ್, ಭಾವಾನಗರ, ಜಾಮ್‌ನಗರ, ಗಾಂಧಿನಗರ ಮತ್ತು ಜುನಾಗಢದಲ್ಲಿ ಸೆಪ್ಟೆಂಬರ್ 9ರಿಂದ 19ರವರೆಗೆ ರಾತ್ರಿ ಕರ್ಫ್ಯೂ ಆರಂಭದ ಅವಧಿಯನ್ನು ಮಧ್ಯರಾತ್ರಿ 12 ಗಂಟೆಗೆ ವಿಸ್ತರಿಸಲಾಗಿದೆ.
ಸಾರ್ವಜನಿಕ ಪೆಂಡಾಲ್‌ಗಳಲ್ಲಿ ನಾಲ್ಕು ಅಡಿಯ ಗಣೇಶ ಮೂರ್ತಿ ಮತ್ತು ಮನೆಗಳಲ್ಲಿ 2 ಅಡಿಯ ಮೂರ್ತಿ ಇಟ್ಟು ಪೂಜೆ ನಡೆಸಲು ಅವಕಾಶ ನೀಡಲಾಗಿದೆ.