Tuesday, 7th January 2025

Covid Like Virus: ಚೀನಾದಲ್ಲಿ ಹೊಸ ವೈರಸ್ ಪತ್ತೆ;‌ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮ

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ರೋಗವು 5 ವರ್ಷಗಳ ಹಿಂದೆ ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿತ್ತು. ಜನರು ತತ್ತರಿಸಿ ಹೋಗಿದ್ದರು. ಕೋವಿಡ್ ವೈರಾಣು ಜಗತ್ತನ್ನು ಕಾಡಿದ 5 ವರ್ಷಗಳ ನಂತರ ಈಗ ಚೀನಾದಲ್ಲಿ(China) ಮತ್ತೊಂದು ನಿಗೂಢ ವೈರಾಣು ಕಂಡು ಬಂದಿದ್ದು, ಎಲ್ಲರಲ್ಲೂ ಆತಂಕ ಹೆಚ್ಚಿದೆ (Covid Like Virus).

ಈ ಮಧ್ಯೆ ಭಾರತವು ದೇಶದಲ್ಲಿನ ಉಸಿರಾಟ ಮತ್ತು ಇನ್ನಿತರ ಅನಾರೋಗ್ಯ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಶುಕ್ರವಾರ (ಜ. 3) ಮೂಲಗಳು ತಿಳಿಸಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಅಂತಾರಾಷ್ಟ್ರೀಯ ಏಜೆನ್ಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂಬ ಮಾಹಿತಿಯಿದೆ. “ನಾವು ಪರಿಸ್ಥಿತಿಯನ್ನು ಹತೋಟಿಗೆ ತರುತ್ತೇವೆ. ಒಂದಷ್ಟು ಕ್ರಮಗಳನ್ನು ಈಗಲೇ ಕೈಗೊಳ್ಳುತ್ತೇವೆ. ಸಾಂಕ್ರಾಮಿಕ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆʼʼ ಎಂದು ಸಚಿವಾಲಯ ತಿಳಿಸಿದೆ (HMPV Virus).

ಹ್ಯೂಮನ್ ಮೆಟಾಪ್ನ್ಯೂಮೊ ವೈರಸ್ (Human Metapneumovirus or HMPV) ಈ ಬಾರಿ ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಾಣು ಆಗಿದ್ದು, ನೆರೆಯ ರಾಷ್ಟ್ರ ಮತ್ತೊಮ್ಮೆ ಹೊಸ ವೈರಾಣುವಿನಿಂದ ಪಾರಾಗಲು ಸ್ಕ್ರೀನಿಂಗ್, ಪತ್ತೆ ಮತ್ತು ಪ್ರತ್ಯೇಕತೆಯ ಪ್ರೋಟೋಕಾಲ್‌ಗಳ ಮೊರೆ ಹೋಗಿದೆ. ತುರ್ತು ಪರಿಸ್ಥಿತಿಯನ್ನೂ ಘೋಷಿಸಿದೆ. ಚೀನಾದಲ್ಲಿ HMPVಯ ವೈರಾಣು ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಉತ್ತರ ಪ್ರಾಂತ್ಯಗಳಲ್ಲಿ 14 ವರ್ಷದೊಳಗಿನವರನ್ನು ಈ ವೈರಾಣು ಹೆಚ್ಚು ಬಾಧಿಸುತ್ತಿದೆ ಎಂದು ಅಧಿಕಾರಿಗಳು ಹೇಳಿರುವುದು ವರದಿಯಾಗಿದೆ.

COVID ಮಾದರಿಯ ಸ್ಥಿತಿ ಎದುರಾಗದಂತೆ ತಡೆಗಟ್ಟಲು ಚೀನಾ ಸರ್ಕಾರ ವೈರಸ್ ಅನ್ನು ನಿಭಾಯಿಸಲು ಪ್ರಯತ್ನ ಪಡುತ್ತಿದೆ. ಚೀನಾದಲ್ಲಿ ಎಚ್‌ಎಂಪಿವಿ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ ಮತ್ತು ರೈನೋವೈರಸ್‌ನಂತಹ ಇತರ ಸಾಂಕ್ರಾಮಿಕ ರೋಗಗಳನ್ನು ಹರಡುವ ಅಪಾಯದಲ್ಲಿದೆ ಎಂದು ಹೇಳಲಾಗಿದೆ.

ಹೊಸ ವೈರಸ್

ಹೊಸ ವೈರಸ್ ಎಲ್ಲ ವಯಸ್ಸಿನ ಜನರಲ್ಲಿ ಉಸಿರಾಟದ ಕಾಯಿಲೆಗಳನ್ನು ಉಂಟು ಮಾಡಬಹುದು. ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಈ ರೋಗಕ್ಕೆ ಬೇಗ ಗುರಿಯಾಗುತ್ತಾರೆ. HMPV ವೈರಾಣುವನ್ನು 2001ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು.ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ವೈರಸ್ ರೋಗಲಕ್ಷಣಗಳು ಚಳಿಗಾಲದಲ್ಲಿ ಸಾಮಾನ್ಯವಾದ ಇತರ ವೈರಲ್ ಸೋಂಕುಗಳಂತೆಯೇ ಇರುತ್ತವೆ.

HMPV ವೈರಸ್‌ನ ಪ್ರಮುಖ ಲಕ್ಷಣಗಳು

  • ಕೆಮ್ಮು, ಜ್ವರ, ಮೂಗು ಕಟ್ಟುವಿಕೆ, ಉಸಿರಾಟದ ತೊಂದರೆ.
  • ಈ ವೈರಸ್‌ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಉಸಿರಾಟದ ಸೋಂಕುಗಳಿಗೆ ಕಾರಣವಾಗುವ ಇತರ ವೈರಸ್‌ಗಳನ್ನು ಹೋಲುತ್ತದೆ.
  • ಸೋಂಕಿನ ಕಾವು ಅವಧಿಯು ಮೂರರಿಂದ ಆರು ದಿನಗಳಾಗಿವೆ. ಅಂದರೆ ಜನರು ಸೋಂಕಿಗೆ ಒಳಗಾದ ಮೂರರಿಂದ ಆರು ದಿನಗಳ ನಂತರ ಅದರ ರೋಗಲಕ್ಷಣಗಳನ್ನು ಎದುರಿಸುತ್ತಾರೆ.
  • ಅನಾರೋಗ್ಯದ ಅವಧಿಯು ಅದರ ತೀವ್ರತೆಯನ್ನು ಅವಲಂಬಿಸಿ ಬದಲಾಗಬಹುದು.

ಈ ಸುದ್ದಿಯನ್ನೂ ಓದಿ:Supreme Court: ಆಸ್ತಿ ಹಕ್ಕು ಸಾಂವಿಧಾನಿಕ; ಸುಪ್ರೀಂ ಕೋರ್ಟ್‌ ಸ್ಪಷ್ಟನೆ