ಬೆಂಗಳೂರು: ನೀವು ನಿಮ್ಮ ಸಾಲದ ಇಎಂಐ ಪಾವತಿಸುವಾಗ ಅಕಸ್ಮಾತ್ 1 ದಿನ ವಿಳಂಬವಾದರೂ, ಅದಕ್ಕೆ ಮುಂದೊಂದು ದಿನ ಭಾರಿ ಬೆಲೆ ತೆರಬೇಕಾದೀತು. ಕೇವಲ ಒಂದು ದಿನವಲ್ಲವೇ ಏನಾಗುತ್ತದೆ ಎಂದು ಅಸಡ್ಡೆ ಮಾಡದಿರಿ. ಏಕೆಂದರೆ ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ (Credit score) ದಿಢೀರ್ ಕುಸಿಯಬಹುದು. ಜತೆಗೆ ಭವಿಷ್ಯದಲ್ಲಿ ಹೊಸ ಸಾಲ ಪಡೆಯುವಾಗ ಹೆಚ್ಚಿನ ಬಡ್ಡಿ ಕಟ್ಟಬೇಕಾದೀತು. ಇಎಂಐ ತಪ್ಪಿದಾಗ ಬ್ಯಾಂಕ್‌ಗಳೂ ದಂಡ ವಿಧಿಸಬಹುದು. ಆದ್ದರಿಂದ ಒಳ್ಳೆಯ ಕ್ರೆಡಿಟ್ ಹಿಸ್ಟರಿಯನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ. ಆದ್ದರಿಂದ ಸಾಲದ ಇಎಂಐಯನ್ನು ಯಾವುದೇ ಕಾರಣಕ್ಕೆ ತಪ್ಪದೆ ಸಕಾಲಕ್ಕೆ ಪಾವತಿಸಿ. ಗಡುವನ್ನು ಮರೆಯದಂತೆ ರಿಮೈಂಡರ್ ಸೆಟ್ ಮಾಡಿಟ್ಟುಕೊಳ್ಳಿ ಅಥವಾ ಆಟೊಮ್ಯಾಟಿಕ್ ಪೇಮೆಂಟ್ ವ್ಯವಸ್ಥೆ ಮಾಡಿಕೊಳ್ಳಿ. ನಿಗದಿತ ದಿನದಂದು ಬ್ಯಾಂಕ್ ಬ್ಯಾಲೆನ್ಸ್ ಕೂಡ ಇರುವಂತೆ ನೋಡಿಕೊಳ್ಳಿ.
ಜನರು ಕೆಲವೊಮ್ಮೆ ಇಎಂಐ ಮೊತ್ತ ಕಡಿತವಾಗುವ ದಿನ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಟ್ಟುಕೊಳ್ಳಲು ಮರೆತಿರುತ್ತಾರೆ. ಕಡಿಮೆ ಬ್ಯಾಲೆನ್ಸ್ ಪರಿಣಾಮ ಇಎಂಐ ಕಡಿತ ಆಗದಿರುವುದಕ್ಕೆ ಸಂಬಂಧಿಸಿ ಮೆಸೇಜ್ ಬಂದಾಗಲಷ್ಟೇ ಅವರ ಅರಿವಿಗೆ ಬರುತ್ತದೆ. ಆಗ ಅರ್ಜೆಂಟಾಗಿ ಹಣ ಹೊಂದಿಸುತ್ತಾರೆ. ದಂಡ ಕಟ್ಟುತ್ತಾರೆ. ಹೀಗಿದ್ದರೂ, ಅಷ್ಟು ಹೊತ್ತಿಗೆ ಕ್ರೆಡಿಟ್ ಸ್ಕೋರ್‌ಗೆ ಧಕ್ಕೆಯಾಗಿರುತ್ತದೆ. ಹಲವು ವರ್ಷಗಳಿಂದ ಕರೆಕ್ಟಾಗಿ ಇಎಂಐ ಕಟ್ಟಿದ್ದರೂ, ಒಂದು ಸಲ ತಪ್ಪಿದರೂ, ಕ್ರೆಡಿಟ್ ಸ್ಕೋರ್‌ಗೆ ಭಾರಿ ಧಕ್ಕೆಯಾಗಿ ಬಿಡುತ್ತದೆ ಎಂಬುದನ್ನು ಮರೆಯಬಾರದು.
ವ್ಯಕ್ತಿಯೊಬ್ಬರು ಗೃಹ ಸಾಲ ತೆಗೆದುಕೊಂಡಿದ್ದರು. ಒಂದು ಸಲ ಇಎಂಐ ಪಾವತಿಸುವಲ್ಲಿ ಒಂದು ದಿನ ವಿಳಂಬವಾಯಿತು. ಇದರ ಪರಿಣಾಮ ಅವರ ಸಿಬಿಲ್ ಸ್ಕೋರ್, 799ರಿಂದ 772ಕ್ಕೆ ಇಳಿದಿತ್ತು. ಮುಂದಿನ ಇಎಂಐಯನ್ನು ಸಕಾಲದಲ್ಲಿ ಕಟ್ಟಿದ್ದರೂ, ಅವರ ಕ್ರೆಡಿಟ್ ಸ್ಕೋರ್ ಆ ವೇಳೆಗೆ ಕುಸಿದಿತ್ತು.
ಇದರಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಕ್ರಿಟಿಕಲ್ ಲೆವೆಲ್‌ನಲ್ಲಿದ್ದರೆ, ನಿಮ್ಮ ಮುಂದಿನ ಲೋನ್ ದುಬಾರಿಯಾಗುತ್ತದೆ. ಹೆಚ್ಚಿನ ಬಡ್ಡಿ ದರವನ್ನು ಕೊಡಬೇಕಾಗುತ್ತದೆ. ಬ್ಯಾಂಕ್‌ಗಳು ಸಾಲ ಮಂಜೂರಾತಿಗೆ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂಬುದನ್ನು ನೋಡುತ್ತವೆ. ಆದ್ದರದಿಂದ ಸಾಲಕ್ಕೆ ಅರ್ಜಿ ಹಾಕುವುದಕ್ಕೆ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ತಪ್ಪದೆ ಗಮನಿಸಿ. ಒಂದು ವೇಳೆ ಕಡಿಮೆ ಇದ್ದರೆ, ಅದನ್ನು ಸುಧಾರಿಸಿದ ಬಳಿಕ ಸಾಲಕ್ಕೆ ಅರ್ಜಿ ಹಾಕಿರಿ. ಉದಾಹರಣೆಗೆ, ನೀವು ಎಸ್‌ಬಿಐನಲ್ಲಿ ಹೋಮ್‌ಲೋನ್ ಟಾಪಪ್ ತೆಗೆದುಕೊಳ್ಳಲು ಬಯಸುತ್ತಿದ್ದೀರಿ ಎಂದು ಭಾವಿಸಿ. ಸಿಬಿಲ್ ಸ್ಕೋರ್ 760 ಇದ್ದರೆ 9.10% ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಹೀಗಿದ್ದರೂ, ನಿಮ್ಮ ಸಿಬಿಲ್ ಸ್ಕೋರ್ 750ಕ್ಕಿಂತ ಕಡಿಮೆ ಇದ್ದರೆ ಬಡ್ಡಿ ದರ 9.30% ಕ್ಕೆ ನಿಗದಿಯಾಗುತ್ತದೆ.
ಸಿಬಿಲ್ ಸ್ಕೋರ್ ಲೆಕ್ಕಾಚಾರದಲ್ಲಿ ಕಳೆದ 36 ತಿಂಗಳಿನ ಕ್ರೆಡಿಟ್ ಹಿಸ್ಟರಿಯನ್ನು ಪರಿಗಣಿಸಲಾಗುತ್ತದೆ. ಆದ್ದರಿಂದ ಯಾವುದೇ ಸಾಲದ ಇಎಂಐ ತಪ್ಪದಂತೆ ನೋಡಿಕೊಳ್ಳಿ. ಕ್ರೆಡಿಟ್ ಕಾರ್ಡ್ ಪೇಮೆಂಟ್‌ಗಳನ್ನೂ ತಪ್ಪದೆ ಪಾವತಿಸಿ. ಇಲ್ಲದಿದ್ದರೆ ಕ್ರೆಡಿಟ್ ಸ್ಕೋರ್‌ಗೆ ಧಕ್ಕೆಯಾಗಬಹುದು. ಇಎಂಐ ಪಾವತಿಸುವಲ್ಲಿ 30 ದಿನ ವಿಳಂಬವಾದರೆ ಕ್ರೆಡಿಟ್ ಸ್ಕೋರ್‌ನಲ್ಲಿ 60 ಅಂಕ ಕುಸಿಯಬಹುದು.
ಇಎಂಐ ತಪ್ಪಿದರೆ ಏನು ಮಾಡಬಹುದು?
ನೀವು ಇಎಂಐ ಪೇಮೆಂಟ್ ಮಾಡುವಲ್ಲಿ ತಪ್ಪಿದಾಗ ಬ್ಯಾಂಕ್ ಸಾಮಾನ್ಯವಾಗಿ ಅಲರ್ಟ್ ಮೆಸೇಜ್ ಕಳಿಸುತ್ತದೆ. ಬ್ಯಾಂಕ್ ಪ್ರತಿನಿಧಿಗಳು ನಿಮಗೆ ಕರೆಯನ್ನೂ ಮಾಡಬಹುದು. ಆಗ ಅದೇ ದಿನ ಇಎಂಐ ಕಟ್ಟಿದರೆ, ಕ್ರೆಡಿಟ್ ಸ್ಕೋರ್ ಕಡಿಮೆಯಾಗುವುದನ್ನು ತಪ್ಪಿಸಬಹುದು ಎನ್ನುತ್ತಾರೆ ತಜ್ಞರು. ಸ್ಕೋರ್‌ಗೆ ಉಂಟಾಗಿರುವ ಧಕ್ಕೆಯನ್ನು ಆದರಿಸಿ ರಿಕವರಿಗೆ ಸಮಯ ತಗಲುತ್ತದೆ ಎನ್ನುತ್ತಾರೆ ತಜ್ಞರು.
ಈ ಸುದ್ದಿಯನ್ನೂ ಓದಿ: Money Tips: CIBIL Score Vs CIBIL Report; ಸಾಲ ಪಡೆಯಲು ಯಾವುದು ಮುಖ್ಯ?