Wednesday, 25th December 2024

Dalit Boy Suicide: ಬರ್ತ್ ಡೇ ಪಾರ್ಟಿಗೆಂದು ಕರೆದು ವಿವಸ್ತ್ರಗೊಳಿಸಿ‌ ಹಲ್ಲೆ; ನೊಂದ ಯುವಕ ಆತ್ಮಹತ್ಯೆ

ಲಕ್ನೋ: ನಮ್ಮ ದೇಶದ ವಿವಿಧ ಕಡೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು (Dalit Assault Case) ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಉತ್ತರ ಪ್ರದೇಶದ (Uttar Pradesh) ಬಸ್ತಿ (Basti) ಎಂಬಲ್ಲಿ ನಡೆದ ದಲಿತ ದೌರ್ಜನ್ಯ ಘಟನೆಯೊಂದರಲ್ಲಿ ಅಮಾಯಕ ಯುವಕನ ಜೀವ ಬಲಿಯಾಗಿದೆ (Dalit Boy Suicide).

ಬರ್ತ್ ಡೇ ಆಚರಣೆಗೆಂದು (Birth Day Celebration) ಹೋಗಿದ್ದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಆತನನ್ನು ತೀವ್ರವಾಗಿ ಅವಮಾನಿಸಿ, ಈ ಘಟನೆಗಳ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ಇದನ್ನು ವೈರಲ್ ಮಾಡುವುದಾಗಿ ಆ ಯುವಕನಿಗೆ ಬೆದರಿಸಿದ ಪರಿಣಾಮ ಆತ ಮನನೊಂದು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸಂಭ್ರಮಾಚರಣೆಯಲ್ಲಿ ದಲಿತ ಯುವಕನಿಗೆ ಯುವಕರ ಗುಂಪು ಥಳಿಸಿ, ಆತನನ್ನು ವಿವಸ್ತ್ರಗೊಳಿಸಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಮಾನವೀಯವಾಗಿ ನಡೆದುಕೊಂಡಿದೆ ಎಂಬ ಮಾಹಿತಿಗಳೂ ಲಭ್ಯವಾಗಿದೆ.

ಸಂತ್ರಸ್ತ ಯುವಕನ ದುಃಖತಪ್ತ ಕುಟುಂಬದವರು ನೀಡಿರುವ ಮಾಹಿತಿಯಂತೆ, ಡಿ.20ರಂದು ರಾತ್ರಿ ಈ ಯುವಕನನ್ನು ಸ್ಥಳೀಯರೊಬ್ಬರು ಆಯೋಜಿಸಿದ್ದ ಪಾರ್ಟಿಗೆಂದು ಆಹ್ವಾನಿಸಲಾಗಿದೆ. ಇಲ್ಲಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ಯುವಕನ ಬಟ್ಟೆಗಳನ್ನು ಕಿತ್ತು ಬಿಸಾಕಿ, ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಇಷ್ಟು ಸಾಲದೆಂಬಂತೆ ನಾಲ್ವರು ಯುವಕರು ಈತನ ಮೇಲೆ ಮೂತ್ರ ವಿಸರ್ಜನೆಯನ್ನೂ ಮಾಡಿ ರಾಕ್ಷಸಿ ಪ್ರವೃತ್ತಿಯನ್ನು ಮೆರೆದಿದ್ದಾರೆ. ಮತ್ತು ಈ ಎಲ್ಲಾ ಕೃತ್ಯಗಳನ್ನು ತಮ್ಮ ಮೊಬೈಲ್ ಫೋನ್ ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಬಳಿಕ ಆ ಯುವಕನಿಗೆ ಈ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಸಂತ್ರಸ್ತ ಯುವಕ ಅವರಲ್ಲಿ ತನ್ನ ಈ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಬೇಡಿಕೊಂಡಿದ್ದಾನೆ. ಆದರೆ ಅವರೆಲ್ಲಾ ಈತನನ್ನು ಇನ್ನಷ್ಟು ಅವಮಾನಿಸಿ, ತಮ್ಮ ಉಗುಳು ನೆಕ್ಕುವಂತೆ ಬಲವಂತ ಮಾಡಿದ್ದಾರೆ ಎಂದು ಸಂತ್ರಸ್ತ ಯುವಕನ ಮನೆಯವರು ಆರೋಪಿಸಿದ್ದಾರೆ.

ಈ ಎಲ್ಲಾ ಅವಮಾನಕರ ಘಟನೆಗಳಿಂದ ಶಾಕ್ ಗೆ ಒಳಗಾದ ಆ ಸಂತ್ರಸ್ತ ಯುವಕ ಅಲ್ಲಿಂದ ನೇರವಾಗಿ ಮನೆಗೆ ಬಂದಿದ್ದಾನೆ ಮತ್ತು ಅಲ್ಲಿ ತನ್ನ ಮೇಲೆ ನಡೆದ ಎಲ್ಲಾ ಅವಮಾನಕರ ಘಟನೆಯನ್ನು ಮನೆಯವರಿಗೆ ತಿಳಿಸಿ ಬಳಿಕ ನೇಣಿಗೆ ಕೊರಳೊಡ್ಡಿದ್ದಾನೆ.

ತಮ್ಮ ಮಗನ ಆಕಸ್ಮಿಕ ಮರಣದಿಂದ ಶಾಕ್ ಗೆ ಒಳಗಾದ ಈ ಯುವಕನ ಕುಟುಂಬಸ್ಥರು ತಕ್ಷಣವೇ ಈತನ ಮೃತದೇಹವನ್ನು ಸಮೀಪದ ಪೊಲೀಸ್ ಠಾಣೆಯ ಎದುರು ಇರಿಸಿ, ತಮ್ಮ ಮಗನ ಸಾವಿಗೆ ಕಾರಣರಾದ ಆರೋಪಿಗಳ ಬಂಧನಕ್ಕೆ ಹಾಗು ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಪ್ರತಿಭಟನೆ ನಡೆಸಿದ್ದಾರೆ.

ಆದರೆ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಮನವಿಗೆ ತಕ್ಷಣಕ್ಕೆ ಸ್ಪಂದಿಸಿಲ್ಲ ಹಾಗೂ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲೂ ಹಿಂದೆ-ಮುಂದೆ ನೋಡಿದ್ದಾರೆ ಎಂದು ಮೃತ ಯುವಕನ ಕುಟುಂಬಸ್ಥರು ಆರೊಪಿಸಿದ್ದಾರೆ.

ಬಳಿಕ ಹೆತ್ತವರು ತಮ್ಮ ಮಗನ ಮೃತದೇಹವನ್ನು ಬಸ್ತಿ ಎಸ್.ಪಿ. ಕಚೇರಿಗೆ ಕೊಂಡೊಯ್ದಿದ್ದಾರೆ ಮತ್ತು ಅಲ್ಲಿ ಪ್ರತಿಭಟನೆಗೆ ಕೂತಿದ್ದಾರೆ. ಇಲ್ಲಿ ಸುಮಾರು ಒಂದು ಗಂಟೆಗಳ ಪ್ರತಿಭಟನೆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಮತ್ತು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಮೃತ ಯುವಕನ ಕುಟುಂಬಸ್ಥರು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಬೆಂಕಿಯಲ್ಲಿ ಮಹಿಳೆ ಹೊತ್ತಿ ಉರಿಯುತ್ತಿದ್ದರೂ ಕ್ಯಾರೇ ಎನ್ನದ ಪೊಲೀಸರು! ಭಯಾನಕ ವಿಡಿಯೊ ಭಾರೀ ವೈರಲ್

ಸ್ಥಳೀಯ ಪೊಲೀಸರು ಭ್ರಷ್ಟರಾಗಿದ್ದು, ಅವರು ತನ್ನ ಮಗನ ಸಾವಿಗೆ ಕಾರಣರಾದ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಯುವಕನ ತಾಯಿ ಆರೊಪಿಸಿದ್ದಾರೆ. ಮೃತ ಯುವಕನ ಮಾವ ಹೇಳುವ ಪ್ರಕಾರ ಈ ಘಟನೆಯ ಹಿಂದಿನ ಉದ್ದೇಶ ಏನಾಗಿತ್ತು ಎಂದು ತಿಳಿದುಬಂದಿಲ್ಲವಾದರೂ, ಇದರ ಹಿಂದೆ ಬಲವಾದ ಕಾರಣವಿರಬಹುದು ಎಂದು ಅವರು ಶಂಕಿಸಿದ್ದಾರೆ.

ಮೃತ ಯುವಕನ ಕುಟುಂಬದವರು ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಬಸ್ತಿ ಡಿ.ಎಸ್.ಪಿ. ಪ್ರದಿಪ್ ಕುಮಾರ್ ತ್ರಿಪಾಠಿ ಹೇಳಿದ್ದಾರೆ. ಯುವಕನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮದ ಭರವಸೆಯನ್ನೂ ತ್ರಿಪಾಠಿ ಇದೇ ಸಂದರ್ಭದಲ್ಲಿ ನೀಡಿದ್ದಾರೆ.