Monday, 25th November 2024

ಡಿಡಿಸಿ ಚುನಾವಣೆ: ನಾಲ್ಕನೇ ಹಂತದ ಮತದಾನ ಪ್ರಗತಿಯಲ್ಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿಗೆ (ಡಿಡಿಸಿ) ಚುನಾವಣೆ ನಡೆಯುತ್ತಿದ್ದು, ಸೋಮವಾರ ನಾಲ್ಕನೇ ಹಂತದ ಮತದಾನ ಆರಂಭವಾಗಿದೆ.

34 ಸ್ಥಾನಗಳಿಗಾಗಿ ಮತದಾನ ನಡೆಯುತ್ತಿದೆ. ಚಳಿಯಿಂದಾಗಿ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು.

ಕಾಶ್ಮೀರದಲ್ಲಿ 48 ಮಹಿಳೆಯರು ಸೇರಿದಂತೆ ಒಟ್ಟು 138 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಜಮ್ಮುವಿನಲ್ಲಿ 34 ಮಹಿಳೆಯರು ಸೇರಿ ಒಟ್ಟು 111 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ನಾಲ್ಕನೇ ಹಂತದಲ್ಲಿ 123 ಸರಪಂಚ್‌ ಸ್ಥಾನಗಳಿಗಾಗಿ ಮತದಾನ ನಡೆಯುತ್ತಿದೆ. ಆದರೆ, ಈಗಾಗಲೇ ಈ ಸ್ಥಾನಗಳಿಗೆ 45 ಸದಸ್ಯ ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 50 ಕ್ಷೇತ್ರಗಳಿಗಾಗಿ ನಡೆಯುತ್ತಿರುವ ಮತದಾನದಲ್ಲಿ 47 ಮಹಿಳೆಯರು ಸೇರಿದಂತೆ 137 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕನೇ ಹಂತದ ಮತದಾನಕ್ಕೆ ಒಟ್ಟು 1,910 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಜಮ್ಮುವಿನಲ್ಲಿ 781 ಮತ್ತು ಕಾಶ್ಮೀರದಲ್ಲಿ 1129 ಮತಗಟ್ಟೆಗಳಿವೆ.