Friday, 10th January 2025

Deepika Padukone: ವಾರಕ್ಕೆ 90 ಗಂಟೆ ಕೆಲಸ ಮಾಡಿ ಎಂದ ಉದ್ಯಮಿ- ನಟಿ ದೀಪಿಕಾ ಪಡುಕೋಣೆ ಫುಲ್‌ ಗರಂ

ಮುಂಬೈ: ಈ ಹಿಂದೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿ ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೋರ್ವ ಉದ್ಯಮಿ ಇದೇ ರೀತಿಯ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಅವರ ಈ ಹೇಳಿಕೆಗೆ ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ(Deepika Padukone) ಕೂಡ ಕಿಡಿಕಾರಿದ್ದಾರೆ. ಉದ್ಯಮಿಯ ಹೇಳಿಕೆಗೆ ಅಸಮಾಧಾನಗೊಂಡಿರುವ ನಟಿ ಇದು ದೊಡ್ಡ ಮಾನಸಿಕ ರೋಗ ಎಂದಿದ್ದಾರೆ.

ಎಲ್‌ ಅಂಡ್‌ ಟಿ ಅಧ್ಯಕ್ಷ (L&T Chairman) ಎಸ್‌ಎನ್ ಸುಬ್ರಹ್ಮಣ್ಯನ್(S N Subrahmanyan) ಅವರು ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದ್ದು ಅದು ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಉದ್ಯಮಿಯ ಹೇಳಿಕೆಯನ್ನು ಖಂಡಿಸಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉದ್ಯಮಿಯ ಹೇಳಿಕೆಗೆ ಪಡುಕೋಣೆ ಆಕ್ರೋಶ

ಪತ್ರಕರ್ತೆ ಫಾಯೆ ಡಿಸೋಜಾ ಅವರ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿರುವ ದೀಪಿಕಾ ಪಡುಕೋಣೆ “ಇಂತಹ ಹಿರಿಯ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನೋಡುವುದು ಆಘಾತಕಾರಿಯಾಗಿದೆ. #ಮೆಂಟಲ್ ಹೆಲ್ತ್ ಮ್ಯಾಟರ್ಸ್” ಎಂದು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಉದ್ಯಮಿಯ ಹೇಳಿಕೆಗೆ ಬಾಲಿವುಡ್‌ ನ ಹಲವು ತಾರೆಯರು ಕೂಡ ಸಿಟ್ಟಿಗೆದ್ದಿದ್ದಾರೆ.

ಎಲ್‌ & ಟಿ ಅಧ್ಯಕ್ಷ ಹೇಳಿದ್ದೇನು?

ಸ್ಪರ್ಧಾತ್ಮಕವಾಗಿ ಪ್ರಗತಿಪರವಾಗಿ ಉಳಿಯಲು ಉದ್ಯೋಗಿ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಹಾಗೂ ಭಾನುವಾರ ಕೂಡ ಕೆಲಸ ಮಾಡಬೇಕು ಎಂದು ಲಾರ್ಸೆನ್ & ಟೂಬ್ರೊ (ಎಲ್ & ಟಿ) ನ ಅಧ್ಯಕ್ಷರಾದ ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿಕೆ ನೀಡಿದ್ದಾರೆ. ಎಲ್‌ & ಟಿಯ ಆರು ದಿನಗಳ ಕೆಲಸದ ನೀತಿಯ ಬಗ್ಗೆ ಅವರನ್ನು ಪ್ರಶ್ನಿಸಲಾಗಿದೆ. ಅದಕ್ಕೆ ಉತ್ತರಿಸಿರುವ ಅವರು, ನಿಜ ಹೇಳಬೇಕೆಂದರೆ ಭಾನುವಾರವೂ ಕೆಲಸ ಮಾಡಿ ಎಂದು ನಿಮಗೆ ಹೇಳಲು ನನಗೆ ಸಾಧ್ಯವಾಗುತ್ತಿಲ್ಲ ಎಂಬ ವಿಷಾದ ನನಗಿದೆ. ಯಾಕೆಂದರೆ ಭಾನುವಾರವೂ ನಿಮಗೆ ಕೆಲಸ ಕೊಟ್ಟರೆ ನನ್ನಷ್ಟು ಸಂತೋಷಪಡುವ ವ್ಯಕ್ತಿ ಬೇರಾರು ಇರಲಾರರು. ನಾನು ಭಾನುವಾರವೂ ಕೆಲಸ ಮಾಡುತ್ತೇನೆ ಎಂದು ವಿಡಿಯೊ ಮೂಲಕ ಹೇಳಿದ್ದಾರೆ

ಭಾನುವಾರ ರಜೆ ತೆಗೆದುಕೊಂಡು ಮನೆಯಲ್ಲಿರುವುದರಿಂದ ಉದ್ಯೋಗಿಗಳಿಗೆ ಆಗುವ ಲಾಭವೇನು ಎಂದು ಪ್ರಶ್ನಿಸಿದ್ದಾರೆ. ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ಹೆಂಡತಿ ಮುಖವನ್ನೇ ಎಷ್ಟು ಹೊತ್ತು ಅಂಥ ನೋಡಲು ಸಾಧ್ಯ? ಎಂಬಂಥ ಹೇಳಿಕೆ ನೀಡಿ ಸುಬ್ರಹ್ಮಣ್ಯನ್‌ ವಿವಾದಕ್ಕೆ ಸಿಲುಕಿದ್ದಾರೆ. ಭಾನುವಾರವೂ ಮನೆಯಲ್ಲಿ ಕಾಲ ಕಳೆಯುವುದು ದಂಡ. ಕಚೇರಿಗೆ ಹೋಗಿ ಕೆಲಸ ಮಾಡಿ ಎಂದಿದ್ದಾರೆ. ಅವರ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದ್ದು, ಪರ ವಿರೋಧದ ಕಾಮೆಂಟ್‌ಗಳು ಬರುತ್ತಿವೆ.

ಈ ಸುದ್ದಿಯನ್ನೂ ಓದಿ:Viral News: ಅಬ್ಬಬ್ಬಾ… 2,10,42,08,405 ರೂಪಾಯಿ ವಿದ್ಯುತ್‌ ಬಿಲ್;‌ ಉದ್ಯಮಿ ತಬ್ಬಿಬ್ಬು!

Leave a Reply

Your email address will not be published. Required fields are marked *