Wednesday, 8th January 2025

Delhi CM Atishi: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನನ್ನ ನಿವಾಸವನ್ನೂ ಕಸಿದುಕೊಂಡಿದೆ; ದಿಲ್ಲಿ ಸಿಎಂ ಅತಿಶಿ ಆರೋಪ

Delhi CM Atishi

ಹೊಸದಿಲ್ಲಿ: ದಿಲ್ಲಿ ವಿಧಾನಸಭೆಯ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಫೆ. 5ರಂದು ಮತದಾನ ನಡೆದು ಫೆ. 8ರಂದು ಫಲಿತಾಂಶ ಘೋಷಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದೀಗ ದಿಲ್ಲಿ ಮುಖ್ಯಮಂತ್ರಿ, ಆಮ್‌ ಆದ್ಮಿ ಪಕ್ಷ (AAP)ದ ನಾಯಕಿ ಅತಿಶಿ (Delhi CM Atishi) ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದು, ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಸುತ್ತಿದೆ ಎಂದು ದೂರಿದ್ದಾರೆ (Delhi Election 2025).

”ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 3 ತಿಂಗಳಲ್ಲಿ 2ನೇ ಬಾರಿಗೆ ನನ್ನ ಅಧಿಕೃತ ನಿವಾಸದ ಹಂಚಿಕೆಯನ್ನು ರದ್ದುಗೊಳಿಸಿದೆ. ಚುನಾವಣಾ ಆಯೋಗವು ದಿಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸುವ ಒಂದು ದಿನ ಮೊದಲು (ಡಿ. 6) ಮನೆ ತೆರವಿನ ನೋಟಿಸ್ ಬಂದಿದೆ” ಎಂದು ಅವರು ಹೇಳಿದ್ದಾರೆ.

”ದಿಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಇಂದು (ಡಿ. 7) ಘೋಷಣೆಯಾಗಿದೆ. ಸೋಮವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 3 ತಿಂಗಳಲ್ಲಿ 2ನೇ ಬಾರಿಗೆ ನನಗಾಗಿ ಹಂಚಿಕೆ ಮಾಡಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸ ತೊರೆಯುವಂತೆ ನೋಟಿಸ್‌ ನೀಡಿದೆ. ಚುನಾಯಿತ ಸರ್ಕಾರದ ಚುನಾಯಿತ ಮುಖ್ಯಮಂತ್ರಿಯಿಂದ ನಿವಾಸವನ್ನು ಕಸಿದುಕೊಂಡಿದೆʼʼ ಎಂದು ಆರೋಪಿಸಿದ್ದಾರೆ.

”3 ತಿಂಗಳ ಹಿಂದೆಯೂ ಅವರು ಈ ರೀತಿಯ ನೋಟಿಸ್‌ ಜಾರಿ ಮಾಡಿದ್ದರು. ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗಲೇ ನನ್ನನ್ನು ಮತ್ತು ನನ್ನ ಕುಟುಂಬವನ್ನು ಬೀದಿಗೆ ತಳ್ಳಿದ್ದಾರೆ. ನಮ್ಮ ಮನೆಯನ್ನು ಕಸಿದುಕೊಳ್ಳುವ ಮೂಲಕ ನಮ್ಮನ್ನು ತಡೆಯಬಹುದು ಎಂದು ಬಿಜೆಪಿ ನಾಯಕರು ಯೋಚಿಸುತ್ತಿದ್ದಾರೆ. ನಮ್ಮ ಕುಟುಂಬ ಸದಸ್ಯರನ್ನು ಗುರಿಯಾಗಿಸಿ ಆರೋಪ ಹೊರಿಸುತ್ತಿದ್ದಾರೆ. ಮನೆಯನ್ನು ಕಸಿದುಕೊಳ್ಳುವ ಮೂಲಕ ನಮ್ಮ ಉತ್ತಮ ಕೆಲಸವನ್ನು ನಿಲ್ಲಿಸಲು ಸಾಧ್ಯವಿಲ್ಲ ಎನ್ನುವುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆʼʼ ಎಂದು ತಿಳಿಸಿದ್ದಾರೆ.

ಎಎಪಿ ಮುಖಂಡ ಸೌರಭ್‌ ಭಾರದ್ವಾಜ್‌ ಅವರು ಅತಿಶಿ ಬೆಂಬಲಕ್ಕೆ ಧಾವಿಸಿದ್ದಾರೆ. ʼʼಬಿಜೆಪಿ ನಾಯಕರು ದಿಲ್ಲಿಯ ಜನರಿಗಾಗಿ ಕೆಲಸ ಮಾಡುತ್ತಿಲ್ಲ. ಮಕ್ಕಳಿಗೆ ಶಿಕ್ಷಣ ಒದಗಿಸಬೇಕು, ಜನ ಸಾಮಾನ್ಯರಿಗೆ ವಿದ್ಯುತ್‌ ನೀಡಬೇಕು ಎನ್ನುವ ಯಾವ ಚಿಂತೆಯೂ ಅವರಿಗಿಲ್ಲ. ಎಎಪಿ ನಾಯಕರ ವಿರುದ್ಧ ಇಲ್ಲ ಸಲ್ಲದ ಆರೋಪ ಹೊರಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಪ್ರತಿಕ್ರಿಯೆ

ಬಿಜೆಪಿ ನಾಯಕ ಅಮಿತ್‌ ಮಾಳವಿಯಾ ಅವರು ಅತಿಶಿ ಆರೋಪವನ್ನು ನಿರಾಕರಿಸಿದ್ದಾರೆ. ʼʼಅತಿಶಿ ಸುಳ್ಳು ಹೇಳುತ್ತಿದ್ದಾರೆ. 2024ರ ಅಕ್ಟೋಬರ್‌ 11ರಂದು ಅತಿಶಿ ಅವರಿಗೆ ಶೀಷ್‌ ಮಹಲ್‌ ಮಂಜೂರು ಮಾಡಲಾಗಿದೆ. ಆದರೆ ಅವರು ಇದುವರೆಗೆ ಆ ಮನೆಯನ್ನು ಸ್ವೀಕರಿಸಿಲ್ಲ. ಹೀಗಾಗಿ ಆ ಮನೆಯ ಬದಲು ಅವರಿಗೆ ಬೇರೆ 2 ಬಂಗಲೆಯನ್ನು ಮಂಜೂರು ಮಾಡಲಾಗಿದೆʼʼ ಎಂದು ತಿಳಿಸಿದ್ದಾರೆ.

ರಂಗೇರಿದ ಚುನಾವಣಾ ಕಣ

ಹೊಸದಿಲ್ಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ದಿಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಿಸಿದರು. ಸತತ 2ನೇ ಅವಧಿಗೆ ಗದ್ದುಗೆಗೆ ಏರಿರುವ ಎಎಪಿ 3ನೇ ಬಾರಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದರೆ, ಇತ್ತ ಬಿಜೆಪಿ ಶತಾಯ ಗತಾಯ ಅಧಿಕಾರ ಹಿಡಿಯಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಹೀಗಾಗಿ ದಿಲ್ಲಿಯ ಚುನಾವಣಾ ಕಣ ದೇಶದ ಗಮನ ಸೆಳೆದಿದೆ.

ಈ ಸುದ್ದಿಯನ್ನೂ ಓದಿ: Delhi Assembly Election 2025: ದಿಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟ; ಫೆ. 5ರಂದು ಒಂದೇ ಹಂತದಲ್ಲಿ ಮತದಾನ

Leave a Reply

Your email address will not be published. Required fields are marked *