Friday, 22nd November 2024

Swati Maliwal: ಸಿಎಂ ನಿವಾಸದ ಎದುರು ಕಲುಷಿತ ನೀರು ಸುರಿದ ಸಂಸದೆ ಸ್ವಾತಿ ಮಲಿವಾಲ್; ಮುಂದೆ ನೀರಿನ ಟ್ಯಾಂಕರನ್ನೇ ತರಿಸುವುದಾಗಿ ಎಚ್ಚರಿಕೆ!

Delhi Pollution

ದೆಹಲಿ: ದಿನೇ ದಿನೆ ಹೆಚ್ಚಾಗುತ್ತಿರುವ ಮಾಲಿನ್ಯದ(Delhi Pollution) ಕುರಿತು ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್(Swati Maliwal) ಶನಿವಾರ ದೆಹಲಿ ಸಿಎಂ ಅತಿಶಿ (CM Atishi) ಅವರ ನಿವಾಸಕ್ಕೆ ಕಲುಷಿತ ನೀರು(Polluted Water) ತುಂಬಿದ ಬಾಟಲಿಯೊಂದಿಗೆ ಆಗಮಿಸಿ ಸಿಎಂ ನಿವಾಸದ ಹೊರಗೆ ಕೊಳಕು ನೀರನ್ನು ಸುರಿದು ಪ್ರತಿಭಟಿಸಿದ್ದಾರೆ.

ಕಲುಷಿತ ನೀರಿನಿಂದ ಬಾಟಲಿಯನ್ನು ಮುಖ್ಯಮಂತ್ರಿ ಅತಿಶಿ ಅವರ ನಿವಾಸದ ಗೇಟ್‌ನ ಹೊರಗೆ ಸುರಿದ್ದಿದ್ದಾರೆ. ಸಾಗರ್‌ಪುರ ಮತ್ತು ದ್ವಾರಕಾದಲ್ಲಿನ ಹಲವಾರು ಮನೆಗಳಿಗೆ ಕಲುಷಿತ ನೀರು ಬರುತ್ತಿರುವ ಬಗ್ಗೆ ಸಿಎಂ ಅತಿಶಿಗೆ ಎಚ್ಚರಿಕೆ ನೀಡಿದ ಸ್ವಾತಿ ಮಲಿವಾಲ್, ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ಬಾರಿ ಕಲುಷಿತ ನೀರಿನ ಟ್ಯಾಂಕರ್ ತರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸ್ವಾತಿ, ಸರ್ಕಾರ ಜನರ ಸಂಕಷ್ಟಕ್ಕೆ ನೆರವಾಗುತ್ತಿಲ್ಲ, ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಮಾಧ್ಯಮದವರ ಜೊತೆ ಮಾತನಾಡಿದ ಸ್ವಾತಿ ಮಲಿವಾಲ್, ಸಾಗರಪುರ, ದ್ವಾರಕಾದ ಜನರು ನನಗೆ ಕರೆ ಮಾಡಿ ಅವರ ಸಮಸ್ಯೆಯನ್ನು ಹೇಳುತ್ತಿದ್ದಾರೆ. ನಾನು ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅವರಿಗೆ ಕಲುಷಿತ ಕಪ್ಪು ಮಿಶ್ರಿತ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದರು . ನಾನು ಆ ಕಪ್ಪು ನೀರನ್ನು ಬಾಟಲಿಯಲ್ಲಿ ತುಂಬಿಕೊಂಡು ಮುಖ್ಯಮಂತ್ರಿ ನಿವಾಸಕ್ಕೆ ತಂದಿದ್ದೇನೆ. 2015ರಿಂದಲೂ ಮುಂದಿನ ವರ್ಷ ಎಲ್ಲವೂ ಸರಿ ಹೋಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಕಪ್ಪು ಕಲುಷಿತ ನೀರನ್ನು ದೆಹಲಿ ಜನರು ಕುಡಿಯಬೇಕೆ? ಎಂದು ಅವರು ಪ್ರಶ್ನಿಸಿದ್ದಾರೆ. ಇದು ಕೇವಲ ಎಚ್ಚರಿಕೆ ಮಾತ್ರ ಇನ್ನು ಹದಿನೈದು ದಿನದಲ್ಲಿ ಈ ಸಮಸ್ಯೆಯನ್ನು ಸರಿ ಪಡಿಸದಿದ್ದರೆ ಕಲುಷಿತ ನೀರಿನ ಟ್ಯಾಂಕರ್‌ ತರಿಸಿ ಮುಖ್ಯ ಮಂತ್ರಿ ನಿವಾಸದ ಬಳಿ ಸುರಿಯುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಭಾರತದ ಕಲುಷಿತ ನಗರಗಳ ಪಟ್ಟಿ: ದೆಹಲಿಗೆ ಅಗ್ರಸ್ಥಾನ