Tuesday, 7th January 2025

Delhi Teen Stabbed : ವಿದ್ಯಾರ್ಥಿಗಳ ನಡುವೆ ತರಗತಿಯಲ್ಲಿ ಮಾರಾಮಾರಿ: ಶಾಲೆಯ ಹೊರಗೆ ಸಹಪಾಠಿಯನ್ನು ಇರಿದು ಕೊಂದ!

ನವದೆಹಲಿ: ಶುಕ್ರವಾರ(ಜ.3) ವಿದ್ಯಾರ್ಥಿಗಳ ನಡುವೆ ತರಗತಿಯಲ್ಲಿ ಮಾರಾಮಾರಿ ನಡೆದಿದ್ದು, ನಂತರ ಶಾಲೆಯ ಹೊರಗೆ ತನ್ನ ಸಹಪಾಠಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಶಕರ್ಪುರ್(Shakarpur) ಪ್ರದೇಶದ ರಾಜಕೀಯ ಸರ್ವೋದಯ ಬಾಲ ವಿದ್ಯಾಲಯದ ಹೊರಗೆ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ(Delhi Teen Stabbed)

ಪೊಲೀಸರ ಪ್ರಕಾರ, ಹತ್ಯೆಗೀಡಾದ ಇಶು ಗುಪ್ತಾ ಎಂಬ ವಿದ್ಯಾರ್ಥಿ ಶಾಲೆಯಲ್ಲಿ ಹೆಚ್ಚುವರಿ ತರಗತಿಯ ಸಮಯದಲ್ಲಿ ತನ್ನ ಸಹಪಾಠಿ ಕೃಷ್ಣನೊಂದಿಗೆ ಜಗಳವಾಡಿದ್ದಾನೆ. ಇಬ್ಬರೂ ಕೈಕೈ ಮಿಲಾಯಿಸಿದ್ದಾರೆ. ತರಗತಿ ಮುಗಿದ ನಂತರ, ಕೃಷ್ಣ ಮೂರ್ನಾಲ್ಕು ಹುಡುಗರೊಂದಿಗೆ ಇನ್ಸ್ಟಿಟ್ಯೂಟ್ ಹೊರಗೆ ಸಹಪಾಠಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಗಳಲ್ಲಿ ಒಬ್ಬ ವಿದ್ಯಾರ್ಥಿಯ ತೊಡೆಗೆ ಇರಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯ ಸಿಬ್ಬಂದಿ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡ ಪರಿಣಾಮ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಪೊಲೀಸ್ ತಂಡ, ಆಂಟಿ ನಾರ್ಕೋಟಿಕ್ ಸ್ಕ್ವಾಡ್ ಮತ್ತು ವಿಶೇಷ ಸಿಬ್ಬಂದಿಗೆ ಆರೋಪಿಗಳನ್ನು ಬಂಧಿಸಲು ಸೂಚಿಸಿದ್ದಾರೆ. ಈ ಕುರಿತು ಪೊಲೀಸರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಘಟನೆಯಲ್ಲಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ – ಐವರು ಅಪ್ರಾಪ್ತರಿದ್ದು, 19 ಮತ್ತು 31 ವರ್ಷದ ಇಬ್ಬರು ಆರೋಪಿಗಳಿದ್ದಾರೆ ಎನ್ನಲಾಗಿದೆ. ಹತ್ಯೆಯ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು,ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SSLC ವಿದ್ಯಾರ್ಥಿಗಳ ನಡುವೆ ಜಗಳ : ಮೂವರಿಗೆ ಚಾಕು ಇರಿತ

ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮುಗಿಸಿ ಹೊರಗೆ ಬರುತ್ತಿದ್ದ ಸಂದರ್ಭದಲ್ಲಿ ಬ್ಯಾಗ್‌ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿತ್ತು. ಚಾಕು ಇರಿತದಿಂದ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ‘ರಾಗಿಗುಡ್ಡ ಹಾಗೂ ಸಾರಕ್ಕಿ ಶಾಲೆ ವಿದ್ಯಾರ್ಥಿಗಳ ನಡುವೆ ಮಾರ್ಚ್ 27ರಂದು ಗಲಾಟೆ ನಡೆದಿತ್ತು. ಇದೇ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿಯಲಾಗಿತ್ತು. ಕೃತ್ಯ ಎಸಗಿದ್ದ ಆರೋಪದಡಿ ಐವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ಜೆ.ಪಿ.ನಗರ ಠಾಣೆಯ ಪೊಲೀಸ್ ಮೂಲಗಳು ಹೇಳಿದ್ದವು.

ಈ ಸುದ್ದಿಯನ್ನೂ ಓದಿ:Controversy: ಸಿಪಿಐ(ಎಂ) ಕಾರ್ಯಕ್ರಮಕ್ಕೆ ಬಾಂಗ್ಲಾ ಗಾಯಕಿಗೆ ಆಹ್ವಾನ; ಭುಗಿಲೆದ್ದ ವಿವಾದ