Thursday, 26th December 2024

Devendra Fadnavis: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್‌ ಆಯ್ಕೆ: ಬಿಜೆಪಿ ನಾಯಕ

Devendra Fadnavis

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಗಾದಿಗೆ ದೇವೇಂದ್ರ ಫಡ್ನವೀಸ್‌ (Devendra Fadnavis) ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಭಾನುವಾರ (ಡಿ. 1) ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಈ ಮೂಲಕ 1 ವಾರಗಳಿಂದ ನಡೆಯುತ್ತಿರುವ ಸಿಎಂ ಹುದ್ದೆಯ ಗೊಂದಲ ನಿವಾರಣೆಯಾದಂತಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ಹೊಸ ನಾಯಕನನ್ನು ಆಯ್ಕೆಗೆ ಡಿ. 2 ಅಥವಾ 3ರಂದು ಸಭೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧ ಎಂದು ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪುನರುಚ್ಚರಿಸಿದ ಕೆಲವೇ ಗಂಟೆಗಳ ನಂತರ ಈ ಹೇಳಿಕೆ ಬಂದಿದೆ.

“ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಡಿ. 2 ಅಥವಾ 3ರಂದು ನಡೆಸಲಾಗುವುದು” ಎಂದು ಬಿಜೆಪಿ ನಾಯಕ ಪಿಟಿಐಗೆ ತಿಳಿಸಿದ್ದಾರೆ. ಈ ಮಧ್ಯೆ ಏಕನಾಥ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಸಿಗಬಹುದು. ಜತೆಗೆ ಶಿವ ಸೇನೆ ಗೃಹ ಖಾತೆಗೆ ಮನವಿ ಸಲ್ಲಿಸಿದೆ ಎನ್ನಲಾಗಿದೆ.

ಅಧಿಕಾರಕ್ಕೆ ಮರಳಿದ ಮಹಾಯುತಿ ಮೈತ್ರಿಕೂಟ

ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಮರಳಿದ ಮಹಾಯುತಿ ಮೈತ್ರಿಕೂಟದ ಬಣಗಳಾದ ಬಿಜೆಪಿ, ಏಕನಾಥ ಶಿಂಧೆ ಅವರ ಶಿವ ಸೇನೆ ಮತ್ತು ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಯಾವುದೇ ಗೊಂದಲಗಳಿಲ್ಲದೆ ಒಮ್ಮತದಿಂದ ಸರ್ಕಾರ ರಚಿಸಲಿದೆ ಎಂದು ಮುಖಂಡರು ತಿಳಿಸಿದ್ದಾರೆ. 288 ಸೀಟುಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಾಯುತಿ ಮೈತ್ರಿಕೂಟ 230 ಕಡೆ ಜಯಗಳಿಸಿದೆ. ಪೈಕಿ ಬಿಜೆಪಿ 132, ಶಿವ ಸೇನೆ 57 ಮತ್ತು ಎನ್‌ಸಿಪಿ 41 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

ಡಿ. 5ರಂದು ಪ್ರಮಾಣ ವಚನ

ಡಿ. 5ರಂದು ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಆಜಾದ್‌ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.

ಶಿವಸೇನೆ ಮತ್ತು ಎನ್‌ಪಿ ಈಗಾಗಲೇ ಕ್ರಮವಾಗಿ ಏಕನಾಥ ಶಿಂಧೆ ಮತ್ತು ಅಜಿತ್ ಪವಾರ್ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿವೆ. ವಿಶೇಷವೆಂದರೆ ಆರಂಭದಲ್ಲಿ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯ ರೇಸ್‌ನಲ್ಲಿ ಏಕನಾಥ ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಸರ್ಕಾರ ರಚನೆ ಸಂಬಂಧ ಇತ್ತೀಚೆಗೆ ಅಮಿತ್‌ ಶಾ ಅವರ ನಿವಾಸದಲ್ಲಿ ನಡೆದ ಮಹಾಯುತಿ ಮೈತ್ರಿಕೂಟದ ಸಭೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್‌, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಮತ್ತು ಶಿವ ಸೇನೆಯ ಏಕನಾಥ ಶಿಂಧೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಈ ಸುದ್ದಿಯನ್ನೂ ಓದಿ: Eknath Shinde: ಮಹಾಯುತಿ ಸಭೆ ರದ್ದು… ಏಕಾಏಕಿ ಸ್ವಗ್ರಾಮಕ್ಕೆ ತೆರಳಿದ ಏಕನಾಥ್‌ ಶಿಂಧೆ