Sunday, 15th December 2024

ಛತ್ತೀಸ್ ಗಢದಲ್ಲಿ ಟೀಚರ್ ಹುದ್ದೆಗೆ ಅರ್ಜಿ: ಅಭ್ಯರ್ಥಿ ಧೋನಿಯಂತೆ, ತಂದೆ ತೆಂಡುಲ್ಕರ್‌ ಅಂತೆ !

ರಾಯ್ ಪುರ: ಮಾಜಿ ಕ್ರಿಕೆಟಿಗ, ಸಚಿನ್ ತೆಂಡೂಲ್ಕರ್ ಅವರ ಪುತ್ರ ಎಂಎಸ್ ಧೋನಿ ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ನೋಡಿ ಆಘಾತಕ್ಕೊಳಗಾದ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದಾರೆ.

ಛತ್ತೀಸ್ ಗಢದಲ್ಲಿ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಧೋನಿ ಹೆಸರಿನಲ್ಲಿ ಅರ್ಜಿ ಹಾಕಲಾಗಿದ್ದು, ಈ ಅರ್ಜಿಯನ್ನು ನೋಡಿ ಅವಾಕ್ಕಾದ ಅಧಿಕಾರಿಗಳು ಅರ್ಜಿದಾರನ ವಿರುದ್ಧ ದೂರು ದಾಖಲಿಸಿದ್ದಾರೆ.

14850 ಶಿಕ್ಷಕರ ನೇಮಕಾತಿಗಾಗಿ ರಾಜ್ಯಸರ್ಕಾರದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಲಕ್ಷಾಂತರ ಮಂದಿ ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದು, ಒಂದು ಅರ್ಜಿ ಎಂಎಸ್ ಧೋನಿ ಎಂಬ ಹೆಸರಿನಿಂದ ಬಂದಿದೆ. ಅರ್ಜಿ ಪರಿಶೀಲಿಸಿದಾಗ ಅದು ನಕಲಿ ಅರ್ಜಿ ಎಂದು ತಿಳಿದಿದೆ. ಅರ್ಜಿದಾರನ ಹೆಸರು ಎಂಎಸ್ ಧೋನಿ ಎಂದೂ ತಂದೆಯ ಹೆಸರು ಸಚಿನ್ ತೆಂಡೂಲ್ಕರ್ ಎಂದೂ ದಾಖಲಿಸಲಾಗಿದೆ. ಅಲ್ಲದೆ ಎಂ.ಎಸ್.ಧೋನಿ ಅವರು ದುರ್ಗ್‌ನ ಸಿಎಸ್‌ವಿಟಿಯು ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ.

ಶಿಕ್ಷಕರ ಸಂದರ್ಶನಕ್ಕೆ ಧೋನಿ ಸೇರಿದಂತೆ 15 ಜನರನ್ನು ಅಧಿಕಾರಿಗಳು ಶುಕ್ರವಾರ ಕರೆದಿದ್ದರು. ಇದರಲ್ಲಿ ಎಲ್ಲರೂ ಹಾಜರಿದ್ದರು. ಆದರೆ ಈ ನಕಲಿ ಅರ್ಜಿ ಸಲ್ಲಿಕೆ ಮಾಡಿದ್ದ ಎಂ.ಎಸ್.ಧೋನಿ ಗೈರು ಹಾಜರಾಗಿದ್ದರು. ಅದಾಗಲೇ ಅಧಿಕಾರಿಗಳಿಗೆ ಅಕ್ರಮದ ಅನುಮಾನ ಗಾಢವಾಗಿತ್ತು. ಹೀಗಾಗಿ ಅಧಿಕಾರಿಗಳು ಪೊಲೀಸ್ ದೂರು ನೀಡಿ ತನಿಖೆ ನಡೆಸಿದ್ದಾರೆ.