Monday, 28th October 2024

Director Ranjith: ನಟನ ಮೇಲೆ ಲೈಂಗಿಕ ದೌರ್ಜನ್ಯ; ಮಲಯಾಳಂನ ಖ್ಯಾತ ನಿರ್ದೇಶಕ ರಂಜಿತ್‌ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು

Director Ranjith

ಬೆಂಗಳೂರು: ಕೆಲವು ದಿನಗಳ ಹಿಂದೆ ಕೇರಳದಲ್ಲಿ ಸಂಚಲನ ಮೂಡಿಸಿದ ಮೀಟೂ (MeToo) ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಮಾಲಿವುಡ್‌ನ ಖ್ಯಾತ ನಿರ್ದೇಶಕ ರಂಜಿತ್‌ (Director Ranjith) ವಿರುದ್ಧ ಲೈಂಗಿಕ ದೌರ್ಜನದ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. 31 ವರ್ಷದ ನಟನೊಬ್ಬ ರಂಜಿತ್‌ ವಿರುದ್ದ ದೂರು ನೀಡಿದ್ದಾರೆ. ಪಂಚತಾರಾ ಹೋಟೆಲ್‌ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮಾಲಿವುಡ್‌ ಸ್ಟಾರ್‌ ಮಮ್ಮುಟ್ಟಿ ಅಭಿನಯದ ʼಬಾವುತ್ತಿಯುಡೆ ನಾಮತ್ತಿಲ್‌ʼ ಚಿತ್ರದ ಶೂಟಿಂಗ್‌ ವೇಳೆ ಮೊದಲ ಬಾರಿ ರಂಜಿತ್‌ ಅವರನ್ನು ಕೇರಳದ ಕೋಝಿಕ್ಕೋಡ್‌ನಲ್ಲಿ ಭೇಟಿ ಮಾಡಿದ್ದಾಗಿ ಸಂತ್ರಸ್ತ ನಟ ತಿಳಿಸಿದ್ದಾರೆ. ಈ ವೇಳೆ ರಂಜಿತ್‌ ಅಡಿಷನ್‌ಗಾಗಿ ಬೆಂಗಳೂರಿನ ಫೈವ್‌ ಸ್ಟಾರ್‌ ಹೋಟೆಲ್‌ಗೆ ಬರುವಂತೆ ತಿಳಿಸಿದ್ದರಂತೆ.

ʼʼ2012ರ ಡಿಸೆಂಬರ್‌ನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಫೈವ್‌ ಸ್ಟಾರ್‌ ಹೋಟೆಲ್‌ಗೆ ಆಹ್ವಾನಿಸಿದ್ದ ರಂಜಿತ್‌ ಅಲ್ಲಿ ಆಡಿಷನ್‌ ನಡೆಸುವುದಾಗಿ ತಿಳಿಸಿದ್ದರು. ಅಲ್ಲಿಗೆ ತೆರಳಿದಾಗ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಪ್ರಮುಖ ಪಾತ್ರ ನೀಡುವುದಾಗಿ ತಿಳಿಸಿ ಬಟ್ಟೆ ಬಿಚ್ಚುವಂತೆ ಆಗ್ರಹಿಸಿದ್ದರುʼʼ ಎಂದು 31 ವರ್ಷದ ನಟ ತಿಳಿಸಿದ್ದಾರೆ. ಆಡಿಷನ್‌ನ ಭಾಗ ಎಂದುಕೊಂಡು ಆಗ ಬಟ್ಟೆ ಬಿಚ್ಚಿದ್ದಾಗಿ ಹೇಳಿದ್ದಾರೆ.

ಈ ಸಂಬಂಧ ಮೊದಲು ಕೇರಳದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಘಟನೆ ನಡೆದಿರುವ ಕಾರಣ ಪ್ರಕರಣವನ್ನು ಇಲ್ಲಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅ. 26ರಂದು ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಡ್‌ ಲಿಮಿಟೆಡ್‌ (BIAL) ಪೊಲೀಸ್‌ ಠಾಣೆಯಲ್ಲಿ ರಂಜಿತ್‌ ವಿರುದ್ಧ ಸೆಕ್ಷನ್‌ 377 (ಅಸ್ವಾಭಾವಿಕ ಅಪರಾಧ) ಮತ್ತ 66 ಇ ( ಗೌಪ್ಯತೆಯ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಗಾಳಿ ನಟಿಯಿಂದಲೂ ದೂರು

3 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿರುವ, 60 ವರ್ಷದ ನಿರ್ದೇಶಕ ರಂಜಿತ್‌ ವಿರುದ್ದ ಕೇಳಿ ಬರುತ್ತಿರುವ ಆರೋಪ ಇದು ಮೊದಲ ಸಲವೇನಲ್ಲ. ಕೆಲವು ದಿನಗಳ ಹಿಂದೆ ಬಂಗಾಳಿ ನಟಿ ಕೊಚ್ಚಿ ಪೊಲೀಸ್‌ ಕಮಿಷನರ್‌ಗೆ ರಂಜಿತ್‌ ವಿರುದ್ದ ದೂರು ದಾಖಲಿಸಿದ್ದರು. ಲೈಂಗಿಕವಾಗಿ ದೌರ್ಜನ್ಯ ಎಸಗಿರುವುದಾಗಿ ಹೇಳಿಕೊಂಡಿದ್ದರು. ಕೊಚ್ಚಿಯ ಹೋಟೆಲ್‌ ಒಂದರಲ್ಲಿ ಕಿರುಕುಳ ನೀಡಿದ್ದಾಗಿ ತಿಳಿಸಿದ್ದರು. ಈ ಘಟನೆ 2009ರಲ್ಲಿ ನಡೆದಿತ್ತು. ಚಿತ್ರದಲ್ಲಿ ನಟಿಸಲು ಆಹ್ವಾನಿಸಿದ ನಂತರ ರಂಜಿತ್ ತನ್ನನ್ನು ಲೈಂಗಿಕ ಉದ್ದೇಶದೊಂದಿಗೆ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಬಂಗಾಳಿ ನಟಿ ಇಮೇಲ್ ಮೂಲಕ ಕಳುಹಿಸಿದ ದೂರಿನಲ್ಲಿ ಆರೋಪಿಸಿದ್ದರು.

ಆದರೆ ಈ ಆರೋಪವನ್ನು ರಂಜಿತ್‌ ನಿರಾಕರಿಸಿದ್ದರು. ತಮ್ಮ ʼಪಾಲೇರಿ ಮಾಣಿಕ್ಯಂʼ ಚಿತ್ರದ ಆಡಿಷನ್‌ಗಾಗಿ ನಟಿಯನ್ನು ಕರೆಸಿದ್ದಾಗಿ, ಬಳಿಕ ಆಕೆ ಪಾತ್ರಕ್ಕೆ ಹೊಂದುತ್ತಿಲ್ಲ ಎಂದು ನಿರಾಕರಿಸಿದ್ದಾಗಿ ತಿಳಿಸಿದ್ದರು. ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಂಜಿತ್‌ ರಾಜ್ಯ ಸರ್ಕಾರದ ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಈ ಸುದ್ದಿಯನ್ನೂ ಓದಿ: Me Too Row: ಬಾಲಿವುಡ್‌ನಲ್ಲಿ ಮತ್ತೆ ಭುಗಿಲೆದ್ದ #MeToo ವಿವಾದ; ಲೈಂಗಿಕ ದೌರ್ಜನ್ಯದ ವಿರುದ್ಧ ಬಿಗ್‌ಬಾಸ್‌ ವಿನ್ನರ್‌ ಧ್ವನಿ