Friday, 22nd November 2024

Donald Trump: ಕೊನೆಯ ಕ್ಷಣದಲ್ಲಿ ಕಾಶ್ ಪಟೇಲ್‌ ಹೆಸರು ಕೈಬಿಟ್ಟ ಟ್ರಂಪ್‌-CIA ಮುಖ್ಯಸ್ಥರಾಗಿ ಜಾನ್ ರಾಟ್‌ಕ್ಲಿಫ್ ನೇಮಕ

Donald Trump

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್(Donald Trump) ಮಂಗಳವಾರ ರಾಷ್ಟ್ರೀಯ ಗುಪ್ತಚರ ಮಾಜಿ ನಿರ್ದೇಶಕ ಜಾನ್ ರಾಟ್‌ಕ್ಲಿಫ್ ಅವರನ್ನು ತಮ್ಮ ಹೊಸ ಆಡಳಿತದಲ್ಲಿ ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ ಸಿಐಎ (Central Intelligence Agency) ನಿರ್ದೇಶಕರಾಗಿ ಘೋಷಿಸಿದ್ದಾರೆ. ಈ ಹಿಂದೆ CIA ಮುಖ್ಯಸ್ಥರನ್ನಾಗಿ ಟ್ರಂಪ್ ಅವರ ಆಪ್ತ, ಭಾರತೀಯ ಮೂಲದ ಕಾಶ್ ಪಟೇಲ್‌ (Kash Patel) ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ರಾಟ್‌ಕ್ಲಿಫ್ ನೇಮಕ ಮೂಲಕ ಕಾಶ್‌ ಪಟೇಲ್‌ ಅವರ ಹೆಸರನ್ನು ಕೈಬಿಟ್ಟಿದ್ದಾರೆ.

ಐತಿಹಾಸಿಕ ಚುನಾವಣಾ ಗೆಲುವಿನ ನಂತರ ಟ್ರಂಪ್, ಮುಂದಿನ ವರ್ಷದ ಜನವರಿಯಲ್ಲಿ ಪ್ರಮಾಣ ವಚನ ಸ್ವೀಕಾರದ ನಂತರ ಪ್ರಾರಂಭವಾಗುವ ತನ್ನ ಹೊಸ ಆಡಳಿತದಲ್ಲಿ ಪ್ರಮುಖ ಸ್ಥಾನಗಳಲ್ಲಿ ತನ್ನ ಕ್ಯಾಬಿನೆಟ್ ಮತ್ತು ಸದಸ್ಯರನ್ನು ನಾಮನಿರ್ದೇಶನ ಮಾಡುವ ಪ್ರಕ್ರಿಯೆಯಲ್ಲಿದೆ. ಟ್ರಂಪ್ ಅವರ ಘೋಷಣೆಯು ಭಾರತೀಯ ಮೂಲದ ಮಾಜಿ ರಿಪಬ್ಲಿಕನ್ ಹೌಸ್ ಸಿಬ್ಬಂದಿ ಕಶ್ಯಪ್ ‘ಕಾಶ್’ ಪಟೇಲ್ ಅವರನ್ನು ಸಿಐಎ ಮುಖ್ಯಸ್ಥ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆಯ ಬಗ್ಗೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.

ಟ್ರಂಪ್ ತಮ್ಮ ಘೋಷಣೆಯಲ್ಲಿ ಹೇಳಿದ್ದೇನು?

CIA ಮುಖ್ಯಸ್ಥರಾಗಿ ತಮ್ಮ ನಾಮನಿರ್ದೇಶನದ ಕುರಿತು ಘೋಷಣೆ ಮಾಡಿದ ಟ್ರಂಪ್, ರಾಟ್‌ಕ್ಲಿಫ್ ದೇಶದ ನಾಗರಿಕರ ಸಾಂವಿಧಾನಿಕ ಹಕ್ಕುಗಳಿಗಾಗಿ ನಿರ್ಭೀತ ಹೋರಾಟಗಾರ ಮತ್ತು ಉನ್ನತ ಮಟ್ಟದ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಬದ್ಧರಾಗಿದ್ದಾರೆ. ಜಾನ್ ರಾಟ್‌ಕ್ಲಿಫ್ ಯಾವಾಗಲೂ ಅಮೇರಿಕನ್ ಸಾರ್ವಜನಿಕರೊಂದಿಗೆ ಸತ್ಯ ಮತ್ತು ಪ್ರಾಮಾಣಿಕತೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಹಂಟರ್ ಬಿಡೆನ್ ಅವರ ಲ್ಯಾಪ್‌ಟಾಪ್ ಬಗ್ಗೆ 51 ಗುಪ್ತಚರ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾಗ, ಒಬ್ಬ ಜಾನ್ ರಾಟ್‌ಕ್ಲಿಫ್ ಅಮೆರಿಕದ ಜನರಿಗೆ ಸತ್ಯವನ್ನು ಹೇಳುತ್ತಿದ್ದರು, ”ಎಂದು ಟ್ರಂಪ್ ಹೇಳಿದ್ದಾರೆ.

ಜಾನ್ ರಾಟ್‌ಕ್ಲಿಫ್ ಹಿನ್ನೆಲೆ ಏನು?

ರಾಟ್‌ಕ್ಲಿಫ್ ಅವರು 2020 ರಲ್ಲಿ ಟ್ರಂಪ್ ಅವರ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ ಅವರ ಅವಧಿಯ ಅಂತ್ಯದ ವೇಳೆಗೆ ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರು ಟ್ರಂಪ್‌ ಅವರ ನಿಕಟ ಮಿತ್ರ ಎಂದು ತಿಳಿದುಬಂದಿದೆ. ರಾಟ್‌ಕ್ಲಿಫ್ ಅನ್ನು ಮೇ 2020 ರಲ್ಲಿ ಯುಎಸ್‌ನ ಉನ್ನತ ಬೇಹುಗಾರ ಎಂದು ಘೋಷಿಸಲಾಯಿತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಕಾಶ್ ಪಟೇಲ್ ಯಾರು?

ವಕೀಲರಾಗಿ, ಸರ್ಕಾರಿ ಅಭಿಯೋಜಕರಾಗಿ ಹಾಗೂ ವೈಟ್ ಹೌಸ್‌ನ ಸಿಬ್ಬಂದಿಯಾಗಿ ದುಡಿದಿರುವ ಅನುಭವ ಹೊಂದಿರುವ ಕಾಶ್ ಪಟೇಲ್ ಅವರ ಮೂಲ ಹೆಸರು ಕಶ್ಯಪ್‌ ಪಟೇಲ್‌. ಪಟೇಲ್ ತಮ್ಮ ವೃತ್ತಿ ಜೀವನದುದ್ದಕ್ಕೂ ವಿವಾದಕ್ಕೆ ಸಿಲುಕಿದ್ದಾರೆ. ಟ್ರಂಪ್ ಅವರ ರಾಜಕೀಯ ದ್ವೇಷಿಗಳನ್ನ ಕಟಕಟೆಗೆ ತಂದು ನಿಲ್ಲಿಸುವ ಸವಾಲೊಡ್ಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಿಐಎ ಮುಖ್ಯಸ್ಥರಾಗಿ ನೇಮಕಗೊಳ್ಳಲು ಕಾಶ್‌ ಪಟೇಲ್ ಸೆನೆಟ್ ಮತವನ್ನು ಪಡೆಯಲು ವಿಫಲವಾದರೆ, ಟ್ರಂಪ್ ಆಡಳಿತವು ಅವರಿಗೆ ರಾಷ್ಟ್ರೀಯ ಭದ್ರತಾ ಮಂಡಳಿ (National Security Council)ಯಲ್ಲಿ ಉನ್ನತ ಸ್ಥಾನವನ್ನು ನೀಡುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟ್ರಂಪ್‌ ಅವರು ಕಾಶ್‌ ಪಟೇಲ್‌ ಅವರ ಹೆಸರನ್ನು ಕೈಬಿಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: Trump Effect on Stock Market: ಟ್ರಂಪ್‌ ಎಫೆಕ್ಟ್- ಭಾರತದಲ್ಲಿ ಯಾವ ಸೆಕ್ಟರ್‌ ಷೇರಿಗೆ ಲಾಭ?