Thursday, 7th November 2024

Donald Trump: ‘ಮೋದಿಯನ್ನು ವಿಶ್ವವೇ ಪ್ರೀತಿಸುತ್ತದೆ..’ ಗೆಲುವಿನ ಸಂಭ್ರಮದ ಮಧ್ಯೆ ನಮೋ ಗುಣಗಾನ ಮಾಡಿದ ಟ್ರಂಪ್‌

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ (US presidential elections) ಯಲ್ಲಿ ಕಮಲಾ ಹ್ಯಾರಿಸ್ (Kamala Harris) ಅವರನ್ನು ಮಣಿಸಿ ಯುಎಸ್ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್(Donald Trump) ಅವರು ಎರಡನೇ ಭಾರಿಗೆ ಅಧ್ಯಕ್ಷ ಸ್ಥಾನದ ಗದ್ದುಗೆ ಏರಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ, ಸುದ್ದಿವಾಹಿನಿಗಳಲ್ಲಿ ಎಲ್ಲಾ ಕಡೆ ಡೊನಾಲ್ಡ್ ಟ್ರಂಪ್ ಅವರದ್ದೇ ಸದ್ದು ಆಗುತ್ತಿದ್ಸು, ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಟ್ರಂಪ್ ಜಯಭೇರಿ ಬಾರಿಸಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿಯಿದ್ದು, ಫ್ಲೋರಿಡಾದ ಪಾಂಬೀಚ್ ಕೌಂಟಿ ರೆಸಾರ್ಟಿನಲ್ಲಿ, ಟ್ರಂಪ್ ಎಂಡ್ ಟೀಂ ವಿಜಯೋತ್ಸವವನ್ನೂ ಆಚರಿಸಿದೆ.

ವಿಶೇಷ ಎಂದರೆ ಟ್ರಂಪ್ ಗೆಲುವು ಭಾರತೀಯರಿಗೂ ಖುಷಿ ತಂದಿದ್ದು, ರಾಜಕೀಯ ನೆಲೆಗಟ್ಟಿನಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಟ್ರಂಪ್ ಅವರ ಹಿಂದಿನ ಅಧಿಕಾರಾವಧಿಯಲ್ಲಿ ಬಲಗೊಂಡ ಭಾರತದೊಂದಿಗಿನ ಸ್ನೇಹವನ್ನು ದೃಷ್ಟಿಯಲ್ಲಿಟ್ಟುಕೊಂಡು ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳಬಹುದು ಎನ್ನಲಾಗುತ್ತಿದೆ.

2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು 60 ಮಿಲಿಯನ್ ಮತಗಳೊಂದಿಗೆ ಭರ್ಜರಿ ಜಯ ಸಾಧಿಸಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ 47ನೇ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

“ನನ್ನ ಆತ್ಮೀಯ ಸ್ನೇಹಿತ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಗೆಲುವಿಗಾಗಿ ಅವರನ್ನು ಅಭಿನಂದಿಸುತ್ತಿದ್ದೇನೆ. ನಿಮ್ಮ ಹಿಂದಿನ ಅಧ್ಯಕ್ಷೀಯ ಅವಧಿಯಲ್ಲಿ ನೀವು ಯಶಸ್ಸನ್ನು ಕಂಡಿದ್ದೀರಿ. ಭಾರತ ಮತ್ತು ಅಮೆರಿಕಾದ ನಡುವಿನ ಬಾಂಧವ್ಯ ಇನ್ನಷ್ಟು ಬಲಗೊಳ್ಳಲಿದೆ ಎಂದು ನಾನು ಆಶಿಸುತ್ತೇನೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಹೌದು ಅಧ್ಯಕ್ಷೀಯ​ ಚುನಾವಣೆಯಲ್ಲಿ ಟ್ರಂಪ್ ಗೆಲುವು ಕಾಣುತ್ತಿದ್ದಂತೆ ಭಾರತದ ಪ್ರಧಾನಿ ಮೋದಿ ಅವರು ಯುಎಸ್​ ನೂತನ ಅಧ್ಯಕ್ಷ ಟ್ರಂಪ್‌ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಟ್ರಂಪ್ ಮತ್ತು ಮೋದಿ ಇಬ್ಬರೂ ಒಬ್ಬರನ್ನೊಬ್ಬರು ಉತ್ತಮ ಸ್ನೇಹಿತರು ಎಂದು ಕರೆದುಕೊಳ್ಳುತ್ತಾರೆ. ಇಬ್ಬರ ಅಧಿಕಾರಾವಧಿಯಲ್ಲಿ ಈ ಇಬ್ಬರು ಮಹಾನ್ ನಾಯಕರು ಪರಸ್ಪಸರ ದೇಶಗಳಿಗೆ ಆಹ್ವಾನಿಸಿ ದೊಡ್ಡ ಕಾರ್ಯಕ್ರಮವನ್ನ ನಡೆಸಿದ್ದರು. ಇದೀಗ ಮತ್ತೊಮ್ಮೆ ಟ್ರಂಪ್ ಗೆಲ್ಲುತ್ತಿದ್ದಂತೆ ಮೋದಿ ಕರೆ ಮಾಡಿ ಅಭಿನಂದನೆ ಸಲ್ಲಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೇ, ನಿಮ್ಮ ಹಿಂದಿನ ಅವಧಿಯ ಯಶಸ್ಸನ್ನು ಮುಂದುವರೆಸುತ್ತಿದ್ದೀರಿ. ಭಾರತ-ಅಮೆರಿಕ ವ್ಯಾಪಕ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು, ನಮ್ಮ ಸಹಯೋಗವನ್ನು ನವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಜನರ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡೋಣ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸೋಣ ಎಂದು ಮೋದಿ ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ.

ಅಷ್ಟೇ ಅಲ್ಲದೇ ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಟ್ರಂಪ್ ಅವರನ್ನು ಘೋಷಿಸಿದ 12 ಗಂಟೆಗಳ ಒಳಗೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಪೋನ್ ಸಂಭಾಷಣೆ ನಡೆದಿದ್ದು, ಇಬ್ಬರು ವಿಶ್ವನಾಯಕರು ಪರಸ್ಪರ ತಮ್ಮನ್ನು ಹೊಗಳಿಕೊಂಡಿದ್ದಾರೆ.

ಇದೇ ವೇಳೆ ಟ್ರಂಪ್‌ ಸಹ ಮೋದಿಯ ಗುಣಗಾನ ಮಾಡಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ಜಗತ್ತೇ ಪ್ರೀತಿಸುತ್ತದೆ ಎಂದಿದ್ದಾರೆ ಟ್ರಂಪ್. ಅಲ್ಲದೇ ಮೋದಿ ಮಹಾನ್‌ ವ್ಯಕ್ತಿ ಹಾಗೂ ಭಾರತ ಅಮೋಘ ರಾಷ್ಟ್ರ ಎಂದು ಮೆಚ್ಚುಗೆ ಸೂಚಿಸಿರುವುದು ವರದಿಯಾಗಿದೆ. ಚೀನಾ ಕಟ್ಟಿ ಹಾಕಲು ಸಹಕಾರಿ: ಟ್ರಂಪ್ ಗೆದ್ದಿರುವುದು ಭಾರತಕ್ಕೆ ಪ್ಲಸ್‌ ಪಾಯಿಂಟ್‌ ಅಂತಲೇ ಹೇಳಲಾಗ್ತಿದೆ. ಯಾಕೆಂದರೆ, ಅಮೆರಿಕದ ಅಧ್ಯಕ್ಷ ಭಾರತದ ಪರವಾದ ಒಲವು ಹೊಂದಿದ್ದು, ಇದು ಚೀನಾವನ್ನು ಕಟ್ಟಿ ಹಾಕುವುದಕ್ಕೆ ಭಾರತಕ್ಕೆ ಸಹಕಾರಿಯಾಗಲಿದೆ ಅಂತ ಹೇಳಲಾಗ್ತಿದೆ.

ಟ್ರಂಪ್ ಸರ್ಕಾರದ ನಿರ್ಧಾರಗಳೂ ಭಾರತಕ್ಕೆ ಅನುಕೂಲಕರವಾಗಿವೆ. ಟ್ರಂಪ್ ಗೆಲುವು ಭಾರತ-ಅಮೆರಿಕ ಸಂಬಂಧಗಳನ್ನು ಅದು ಎಷ್ಟು ಗಟ್ಟಿಗೊಳಿಸುತ್ತದೆ ಎಂದೇ ಪರಿಗಣಿಲಾಗುತ್ತಿದೆ. ವಾಸ್ತವವಾಗಿ, ಅಮೆರಿಕದಲ್ಲಿ ಟ್ರಂಪ್ ಅವರ ಗೆಲುವಿನಿಂದ ಭಾರತದಲ್ಲಿ ಸಂತಸ ಮನೆ ಮಾಡುತ್ತಿದೆ. ಏಕೆಂದರೆ ಎರಡು ದೇಶಗಳ ನಡುವಿನ ಸಂಬಂಧದ ನಾಲ್ಕು ದೊಡ್ಡ ಸ್ತಂಭಗಳಿವೆ. ಮೊದಲನೆಯದು ವ್ಯಾಪಾರ, ಎರಡನೆಯದು ತಂತ್ರಜ್ಞಾನ, ಮೂರನೆಯದು ಶಕ್ತಿ ಮತ್ತು ನಾಲ್ಕನೆಯದು ರಕ್ಷಣಾ ಮತ್ತು ಕಾರ್ಯತಂತ್ರದ ಸಂಬಂಧಗಳು. ಮುಂದಿನ ದಿನಗಳಲ್ಲಿ ಈ ನಾಲ್ಕು ವಿಷಯಗಳಿಗೆ ಸಂಬಂಧಿಸಿದ ಸ್ನೇಹ ಸಂಬಂಧ ಇನ್ನಷ್ಟು ಉತ್ತಮವಾಗಲಿದೆ ಎಂಬ ಆಶಾಭಾವನೆ ಉಭಯ ದೇಶಗಳ ಜನರಲ್ಲಿದ್ದು, ಇದಕ್ಕೆ ಟ್ರಂಪ್ ಮತ್ತು ಮೋದಿ ನಡುವಿನ ಸ್ನೇಹವೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: Viral Video: ಸೀಟಿಗಾಗಿ ಹೋರಾಡಬೇಕಿಲ್ಲ…ಜಗಳ ಮಾಡೋ ಅಗತ್ಯ ಇಲ್ಲವೇ ಇಲ್ಲ…ಈತನ ಜಾಣ್ಮೆಗೆ ನೆಟ್ಟಿಗರು ಫುಲ್‌ ಫಿದಾ!