Friday, 27th December 2024

Dr Manmohan Singh: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Dr Manmohan Singh

ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ (Dr Manmohan Singh) ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದ್ದು, ಗುರುವಾರ (ಡಿ. 26) ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಸುಮಾರು 8 ಗಂಟೆ ವೇಳೆಗೆ ದಿಲ್ಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (AIIMS)ಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಯಾವ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.

92 ವರ್ಷದ ಮನಮೋಹನ್‌ ಸಿಂಗ್‌ ಅವರಿಗೆ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಿಟಿಐ ವರದಿ ಮಾಡಿದೆ. 2004ರಿಂದ 2014ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್‌ ಸಿಂಗ್ ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. 33 ವರ್ಷಗಳ ನಂತರ ಅವರು ಮೇಲ್ಮನೆಯಲ್ಲಿ ತಮ್ಮ ರಾಜಕೀಯ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು.

ಪಿ.ವಿ.ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ 1991ರ ಜೂನ್‌ನಲ್ಲಿ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಾಲ್ಕು ತಿಂಗಳ ನಂತರ ಅವರು 1991ರಲ್ಲಿ ರಾಜ್ಯಸಭೆಗೆ ಪ್ರವೇಶಿಸಿದರು. ಅವರು ಮೇಲ್ಮನೆಯಲ್ಲಿ 5 ಅವಧಿಗೆ ಅಸ್ಸಾಂ ಅನ್ನು ಪ್ರತಿನಿಧಿಸಿದರು ಮತ್ತು 2019ರಲ್ಲಿ ರಾಜಸ್ಥಾನಕ್ಕೆ ಸ್ಥಳಾಂತರಗೊಂಡಿದ್ದರು.

ಭಾರತವನ್ನು ಖಾಸಗೀಕರಣ ಮತ್ತು ಜಾಗತೀಕರಣದತ್ತ ಮುನ್ನಡೆಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಮನಮೋಹನ್ ಸಿಂಗ್ ಅವರನ್ನು ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು. 1932ರ ಸೆಪ್ಟೆಂಬರ್‌ 26ರಂದು ಜನಿಸಿದ ಇವರು ಕೆಂಬ್ರಿಡ್ಜ್‌ ವಿಶ್ವ ವಿದ್ಯಾನಿಲಯದಲ್ಲಿ ಶಿಕ್ಷಣ ಪೂರೈಸಿದ್ದಾರೆ.

ಈ ಸುದ್ದಿಯನ್ನೂ ಓದಿ: ರಾಜ್ಯಸಭೆಯಿಂದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿವೃತ್ತಿ