Friday, 27th December 2024

Dr Manmohan Singh: ಮನಮೋಹನ್ ಸಿಂಗ್; ಭಾರತದ ಆರ್ಥಿಕ ಸುಧಾರಣೆಯ ಹರಿಕಾರ

Dr Manmohan Singh

ಹೊಸದಿಲ್ಲಿ: ಭಾರತೀಯ ಅರ್ಥ ವ್ಯವಸ್ಥೆಯ ದಿಕ್ಕನ್ನೇ ಬದಲಿಸಿದ ಧೀಮಂತ ನಾಯಕ, ಕಾಂಗ್ರೆಸ್‌ ಮುಖಂಡ, ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ (Dr Manmohan Singh) ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಸಂಸತ್ತಿನಲ್ಲಿ 33 ವರ್ಷಗಳ ಸುದೀರ್ಘ ಸೇವೆ ಬಳಿಕ ಈ ವರ್ಷದ ಏ. 3ರಂದು ಅವರು ರಾಜ್ಯಸಭೆಯಿಂದ ನಿವೃತ್ತಿ ಹೊಂದಿದ್ದರು. ಈ ಮೂಲಕ ಅವರ ಸುದೀರ್ಘ ಸಂಸದೀಯ ಪಯಣ ಅಂತ್ಯಗೊಂಡಿತ್ತು. ಆರ್‌ಬಿಐ ಗವರ್ನರ್‌, ಅರ್ಥಶಾಸ್ತ್ರಜ್ಞ, ವಿತ್ತ ಸಚಿವ ಮತ್ತು ಪ್ರಧಾನಿಯಾಗಿ ಸಿಂಗ್‌ ಅವರ ಕೊಡುಗೆ ಈ ದೇಶಕ್ಕೆ ಅನನ್ಯ.

ಭಾರತದ ಮೊದಲ ಸಿಖ್‌ ಪ್ರದಾನಿ ಎಂದೇ ಜನಪ್ರಿಯರಾಗಿದ್ದ ಸಿಂಗ್‌ ಅವರು 1932ರ ಸೆಪ್ಟೆಂಬರ್‌ 26ರಂದು ಈಗಿನ ಪಾಕಿಸ್ತಾನದ ಗಾಹದಲ್ಲಿ ಜನಿಸಿದರು. ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿ ಎನಿಸಿಕೊಂಡಿದ್ದಾರೆ. ಜವಾಹರಲಾಲ್ ನೆಹರೂ ನಂತರ ಪೂರ್ಣ 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಆರ್ಥಿಕ ಸುಧಾರಣೆಯ ಹರಿಕಾರ

ಕೇಂಬ್ರಿಡ್ಜ್‌ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಸಿಂಗ್‌, ದೇಶ ಕಂಡ ಅತ್ಯುತ್ತಮ ಅರ್ಥ ಶಾಸ್ತ್ರಜ್ಞರಾಗಿದ್ದರು. ಪಿ.ವಿ.ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ 1991ರ ಜೂನ್‌ನಲ್ಲಿ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು ಭಾರತದ ಆರ್ಥಿಕತೆಯಲ್ಲಿ ಪ್ರದಾನ ಪಾತ್ರ ವಹಿಸಿದ್ದರು.

ಜಾಗತೀಕರಣ ಪರಿಚಯಿಸಿದ್ದ ಸಿಂಗ್‌

ಇನ್ನು ಮನಮೋಹನ್‌ ಸಿಂಗ್‌ ಭಾರತಕ್ಕೆ ಜಾಗತೀಕರಣವನ್ನು ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರು ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ ಭಾರತದ ಆರ್ಥಿಕತೆ ಸಂಪೂರ್ಣ ಹದಗೆಟ್ಟಿತ್ತು. ಮುಕ್ತ ಮಾರುಕಟ್ಟೆಯೊಂದೇ ದೇಶದ ಮುಂದಿರುವ ಮಾರ್ಗ ಎಂದು ಬಲವಾಗಿ ನಂಬಿದ್ದ ಅವರು ಅದಕ್ಕೆ ಅನುಗುಣವಾಗಿ ಕಾರ್ಯ ಪ್ರವೃತ್ತರಾದರು. 1994-95ರ ಬಜೆಟ್‌ನಲ್ಲಿ ಭಾರೀ ಬದಲಾವಣೆಗೆ ಕೈ ಹಾಕಿದರು. ಭಾರತ ಇಂದು ವಿಶ್ವದ 5ನೇ ದೊಡ್ಡ ಆರ್ಥಿಕತೆ ಹೊಂದಿದ ಆಗಿದೆ ಎನ್ನುವುದಾದರೆ, ಅದಕ್ಕೆ ಸಿಂಗ್‌ ಹಾಕಿದ ಅಡಿಪಾಯವನ್ನು ಯಾರೂ ಮರೆಯುವಂತಿಲ್ಲ.

ಜಾಗತೀಕರಣವನ್ನು ಭಯದಿಂದ ನೋಡುತ್ತಿದ್ದ ದಿನಗಳಲ್ಲಿ ಧೈರ್ಯವಾಗಿ ಅದನ್ನು ಅಳವಡಿಸಿಕೊಂಡವರು ಮನಮೋಹನ್‌ ಸಿಂಗ್‌. ಭಾರತದಂತಹ ಕೃಷಿ ಪ್ರಧಾನ ದೇಶಕ್ಕೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನಿಜಕ್ಕೂ ಶಾಪ ಎಂದು ಬೆದರಿಸುತ್ತಿದ್ದವರನ್ನು ದಿಟ್ಟವಾಗಿ ಎದುರಿಸಿ ಬಹುದೊಡ್ಡ ಆರ್ಥಿಕ ಕ್ರಾಂತಿಗೆ ಕಾರಣರಾದವರು. ಜಾಗತೀಕರಣ, ಉದಾರೀಕರಣದಿಂದ ಏನೇನು ಅನುಕೂಲಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿನ ಅಭೂತಪೂರ್ವ ಬದಲಾವಣೆಗೂ ಅವರ ನೀತಿಯೇ ಕಾರಣ ಎನ್ನುತ್ತಾರೆ ಆರ್ಥಿಕ ತಜ್ಞರು.

6 ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಮನಮೋಹನ್‌ ಸಿಂಗ್‌ ಅವರು ಒಮ್ಮೆಯೂ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರಲಿಲ್ಲ ಎನ್ನುವುದು ವಿಶೇಷ. 5 ಬಾರಿ ಅಸ್ಸಾಂನಿಂದ ಮತ್ತು 1 ಬಾರಿ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಈ ಸುದ್ದಿಯನ್ನೂ ಓದಿ: Dr Manmohan Singh: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು