Friday, 22nd November 2024

Durga Puja 2024: ಹಸಿರು ದುರ್ಗೆ, ಮೆಟ್ರೊ ರೈಲು, ವಾರಣಾಸಿ ಘಾಟ್; ದುರ್ಗಾ ಪೂಜೆಗೆ ವೈವಿಧ್ಯಮಯ ಪೆಂಡಾಲ್! ವಿಡಿಯೊಗಳಿವೆ

Durga Puja 2024

ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುವ ನವರಾತ್ರಿ (navaratri) ಉತ್ಸವದ (Durga Puja 2024) ಸಂದರ್ಭದಲ್ಲಿ ಅಲ್ಲಲ್ಲಿ ಅತ್ಯಾಕರ್ಷಕವಾದ ಪೆಂಡಾಲ್‌ಗಳನ್ನು (Pandals) ಹಾಕಲಾಗುತ್ತದೆ. ಅದರಲ್ಲೂ ಕೋಲ್ಕತ್ತಾದಲ್ಲಿ (Kolkata) ಈ ಬಾರಿ ದುರ್ಗಾ ಪೂಜೆಯ ಪೆಂಡಾಲ್‌ನಲ್ಲೂ ಸೃಜನಾತ್ಮಕತೆಯನ್ನು ಪ್ರದರ್ಶಿಸಲಾಗಿದೆ.

ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಮತ್ತು ಹತ್ತನೇ ದಿನ ನಡೆಯುವ ವಿಜಯದಶಮಿಯೊಂದಿಗೆ ಅಕ್ಟೋಬರ್ 12ರಂದು ಉತ್ಸವ ಸಂಪನ್ನಗೊಳ್ಳುತ್ತದೆ. ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ದುರ್ಗೆಯ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ದುರ್ಗಾ ಪೂಜೆ ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದು. ರಾಕ್ಷಸ ಮಹಿಷಾಸುರನ ವಿರುದ್ಧದ ದುರ್ಗಾದೇವಿ ವಿಜಯವನ್ನು ಸಾಧಿಸಿರುವುದರ ಗೌರವದ ಸಂಕೇತವಾಗಿ ಇದನ್ನು ಆಚರಿಸಲಾಗುತ್ತದೆ. ಇದು ದುಷ್ಟರ ವಿರುದ್ಧ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ.

ದುರ್ಗಾ ಪೂಜೆಯ ಮುಖ್ಯ ಅಂಶಗಳಲ್ಲಿ ಪೆಂಡಾಲ್ ರಚನೆಯು ಪ್ರಮುಖವಾಗಿದೆ. ಇದನ್ನು ದೇವಿಯ ವಿಗ್ರಹ ಸ್ಥಾಪನೆಗಾಗಿ ಮಾಡಲಾಗುತ್ತದೆ. ಈ ವರ್ಷ ಕೋಲ್ಕತ್ತಾದ ದುರ್ಗಾಪೂಜಾ ಪೆಂಡಾಲ್‌ಗಳು ವಿವಿಧ ರೀತಿಯ ಥೀಮ್, ಕಲಾತ್ಮಕತೆಯಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಲಾಸ್ ವೇಗಾಸ್ ಗೋಳ

ಸಂತೋಷ್ ಮಿತ್ರ ಚೌಕದಲ್ಲಿ ಲಾಸ್ ವೇಗಾಸ್ ಗೋಳ ಎಲ್ಲರ ಗಮನ ಸೆಳೆಯುತ್ತಿದೆ. ಈ ಪೆಂಡಾಲ್ ನ ದೀಪ, ಅಲಂಕಾರಗಳು ನಗರದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಕಳೆದ ವರ್ಷ ಇವರು ಅಯೋಧ್ಯೆಯ ರಾಮಮಂದಿರದ ಪ್ರತಿಕೃತಿಯನ್ನು ನಿರ್ಮಿಸಿದ್ದರು.

ಹಸಿರು ದುರ್ಗೆ

ಲಾಲಾಬಾಗನ್‌ನಲ್ಲಿ 8,000 ಸಸ್ಯಗಳೊಂದಿಗೆ ಮಾಡಿರುವ ದುರ್ಗಾಪೂಜಾ ಮಂಟಪವು ಪರಿಸರದ ಮಹತ್ವ ಮತ್ತು ಪರಿಸರ ಸ್ನೇಹಿಯ ಅಗತ್ಯವನ್ನು ಒತ್ತಿಹೇಳುತ್ತಿದೆ.

ಮಳೆನೀರು ಸಂರಕ್ಷಣಾ ಪೆಂಡಾಲ್

ಸಾಲ್ಟ್ ಲೇಕ್‌ನಲ್ಲಿರುವ ಮಳೆನೀರು ಸಂರಕ್ಷಣಾ ಪೆಂಡಾಲ್ ಅತ್ಯದ್ಭುತವಾಗಿದೆ. ಇದು ಪರಿಸರ ಸ್ನೇಹಿಯಾಗಿದ್ದು, ಸುಂದರವಾದ ಜಲಪಾತ ಮತ್ತು ಹಚ್ಚ ಹಸಿರಿನ ಅಲಂಕಾರದೊಂದಿಗೆ ಪ್ರಶಾಂತ ವಾತಾವರಣವನ್ನು ಸೃಷ್ಟಿಸಿದೆ.

ಮೆಟ್ರೋ ರೈಲು

ಜಗತ್ ಮುಖರ್ಜಿ ಪಾರ್ಕ್ ನಲ್ಲಿರುವ ಈ ಪೆಂಡಾಲ್ ರೈಲು ಮಾದರಿಯಲ್ಲಿದೆ. ಇದು ಕೋಲ್ಕತ್ತಾದ ಮೆಟ್ರೋ ರೈಲು ವ್ಯವಸ್ಥೆಯನ್ನು ವಿವರಗಳನ್ನು ಒಳಗೊಂಡಿದೆ.

ಸತಿ ಪ್ರಥಾ

ಕಾಶಿ ಬೋಸ್ ಲೇನ್ ಸರ್ಬೋಜನಿನ್ ನಲ್ಲಿ ಸ್ಥಾಪನೆಯಾಗಿರುವ ಈ ಪೆಂಡಾಲ್ ಸತಿ ಪದ್ಧತಿಯನ್ನು ನಿರ್ಮೂಲನೆ ಮಾಡುವಲ್ಲಿ ಬಂಗಾಳವು ನಿರ್ವಹಿಸಿದ ನಿರ್ಣಾಯಕ ಪಾತ್ರದ ಥೀಮ್ ಅನ್ನು ಒಳಗೊಂಡಿದೆ. ಅಲ್ಲದೇ ಭಾರತದಲ್ಲಿ ಇನ್ನೂ ಪ್ರಚಲಿತದಲ್ಲಿರುವ ಬಾಲ್ಯವಿವಾಹದ ಕುರಿತು ಜಾಗೃತಿಯನ್ನು ಮೂಡಿಸುತ್ತಿದೆ.

ವಾರಣಾಸಿ ಘಾಟ್‌

ಚೆಟ್ಲಾ ಅಗ್ರಾಣಿ ದುರ್ಗಾಪೂಜಾ ಪೆಂಡಾಲ್ ನಲ್ಲಿ ದೇವಾಲಯದ ನಗರವಾದ ಕಾಶಿಯ ಸೌಂದರ್ಯವನ್ನು ಕಾಣಬಹುದು. ಇಲ್ಲಿ ಸಾಂಕೇತಿಕ ಗಂಗಾ ಆರತಿ ಮತ್ತು ಹರ್ ಹರ್ ಮಹಾದೇವ್ ಪಠಣಗಳು ನಡೆಯುತ್ತದೆ. ಇದು ವಾರಣಾಸಿಯ ಘಾಟ್‌ಗಳನ್ನು ಪ್ರದರ್ಶಿಸುತ್ತದೆ, ಗಂಗಾ ಮಾಲಿನ್ಯದ ಪ್ರಮುಖ ಸಮಸ್ಯೆಯನ್ನು ಎತ್ತಿ ತೋರಿಸಿದೆ.

ಮನೆಯಂಗಳ

ಗರಿಯಾಹತ್ ನ ತ್ರಿಧರ ಸಮ್ಮಿಲನಿಯಲ್ಲಿ ಭಾರತೀಯ ಸಾಂಪ್ರದಾಯಿಕ ಮನೆಯಂಗಳವನ್ನು ನೆನಪಿಸುವ “ಅಂಗನ್” ಎಂಬ ಥೀಮ್ ಅನ್ನು ಪ್ರದರ್ಶಿಸಲಾಗಿದೆ.

ಲೈವ್ ಪೆಂಡಾಲ್

ಬಗುಯಿಹಾಟಿಯಲ್ಲಿರುವ ಅರ್ಜುನ್‌ಪುರ್ ಆಮ್ರಾ ಸಬಾಯಿ ಕ್ಲಬ್ ಕೋಲ್ಕತ್ತಾದ ದುರ್ಗಾ ಪೂಜೆಯ ನಿಜವಾದ ಚೈತನ್ಯವನ್ನು ಪ್ರದರ್ಶಿಸಿದೆ. ಪ್ರಸ್ತುತ ಆಡಳಿತದಲ್ಲಿ ಬೆಳೆಯುತ್ತಿರುವ ಆರ್ಥಿಕ ಅಸಮಾನತೆ ಮತ್ತು ಸಾಂಸ್ಕೃತಿಕ ತಾರತಮ್ಯವನ್ನು ಈ ಪೆಂಡಾಲ್ ನಲ್ಲಿ ಪ್ರದರ್ಶಿಸಲಾಗಿದೆ.

ಲಾಸ್ಟ್ ಆರ್ಟ್ ಆಫ್ ಕೋಲ್ಕತ್ತಾ

ಬೆಹಲಾದಲ್ಲಿರುವ ದಕ್ಷಿಣಾರಿ ಯುವ ಸರ್ಬೋಜನಿನ್ ಪೆಂಡಾಲ್ ಕೋಲ್ಕತ್ತಾದ ದೀರ್ಘಕಾಲದ ಸಂಸ್ಕೃತಿಯನ್ನು ಚಿತ್ರಿಸಿದೆ. ಈ ಬಾರಿಯ ಅತ್ಯುತ್ತಮ ಪೆಂಡಾಲ್ ಇದು ಎಂದು ಹೇಳಲಾಗುತ್ತಿದೆ.

Navaratri Bangles Trend 2024: ನವರಾತ್ರಿ ಸಂಭ್ರಮಕ್ಕೆ ಜತೆಯಾದ 5 ಡಿಸೈನ್‌‌ನ ಕಲರ್‌ಫುಲ್‌ ಬ್ಯಾಂಗಲ್ಸ್

ತ್ಯಾಜ್ಯದಿಂದ ಪೆಂಡಾಲ್

ದಕ್ಷಿಣಪಾರ ದುರ್ಗೋತ್ಸವದಲ್ಲಿ ತ್ಯಾಜ್ಯ ವಸ್ತುಗಳಿಂದ ಪೆಂಡಾಲ್ ರಚಿಸಲಾಗಿದೆ. ಕಲಾವಿದ ದೇಬಾಶಿಶ್ ಬರುಯಿ ಅವರ ಕಲ್ಪನೆಯಲ್ಲಿ ಇದು ಮೂಡಿ ಬಂದಿದೆ.