ನವದೆಹಲಿ: ದೇಶದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳದ್ದೇ ಕಾರುಬಾರು. ಜನ ನಿಧಾನವಾಗಿ ಪೆಟ್ರೋಲ್, ಡಿಸೇಲ್ ವಾಹನಗಳಿಂದ ಇ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಇ-ಸ್ಕೂಟರ್(E-scooter)ಗಳಂತೂ ಬಹಳ ವೇಗವಾಗಿ ಜನರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಕೇಂದ್ರ ಸರ್ಕಾರ(Union government)ವೂ ಇ-ವಾಹನಗಳ ಬಳಕೆಗೆ ಜನರನ್ನು ಪ್ರೇರೇಪಿಸುತ್ತಿದೆ. ಇದೀಗ ಅಪ್ರಾಪ್ತರು ವಾಹನ ಚಲಾಯಿಸುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇನ್ನು ಮುಂದೇ ಅಪ್ರಾಪ್ತರೂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಚಲಾಯಿಸಲು ಅವಕಾಶ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ. ಆದರೆ ಅಂತಹ ವಾಹನಗಳ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 25 ಕಿಲೋಮೀಟರ್ ಎಂದು ನಿಗದಿಪಡಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮೋಟಾರು ವಾಹನ ಕಾನೂನಿನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಅಪ್ರಾಪ್ತ ವಯಸ್ಕರಿಗೆ ವಾಹನದ ಎಂಜಿನ್ ಸಾಮರ್ಥ್ಯವನ್ನು 50 ಸಿಸಿ ಮತ್ತು ಮೋಟಾರ್ ಶಕ್ತಿಯನ್ನು ಗರಿಷ್ಠ 1,500 ವ್ಯಾಟ್‌ಗಳಿಗೆ ಸೀಮಿತಗೊಳಿಸಲು ಸಚಿವಾಲಯ ನಿರ್ಧರಿಸಿದೆ.
ಅಸ್ತಿತ್ವದಲ್ಲಿರುವ ಕಾನೂನಿಗೆ 67 ತಿದ್ದುಪಡಿಗಳನ್ನು ಸಚಿವಾಲಯ ಪ್ರಸ್ತಾಪಿಸಿದ್ದು, ಅಕ್ಟೋಬರ್ 15 ರವರೆಗೆ ಜನರು ಸಲಹೆಗಳನ್ನು ನೀಡಬಹುದು. ಈ ತಿದ್ದುಪಡಿಗಳಿಗೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬಹುದು. ಪ್ರಸ್ತಾವನೆಯ ಪ್ರಕಾರ, 16 ವರ್ಷಗಳನ್ನು ಪೂರೈಸಿದ ಹದಿಹರೆಯದವರು ಸಾರ್ವಜನಿಕ ಸ್ಥಳಗಳಲ್ಲಿ ಕೇಲವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಓಡಿಸಲು ಅನುಮತಿಸಲಾಗುವುದು, ಅವರು ನಿಗದಿತ ವೇಗದ ಮಿತಿ ಮತ್ತು ಎಂಜಿನ್ ಶಕ್ತಿಯ ಮಿತಿಯನ್ನು ಅನುಸರಿಸಬೇಕು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ಬೇರೆ ಯಾವುದೇ ವಾಹನವನ್ನು ಓಡಿಸಲು ಅನುಮತಿಸಲಾಗುವುದಿಲ್ಲ. ಇದಲ್ಲದೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಸ್ವಯಂಚಾಲಿತ ಗೇರ್ ಹೊಂದಿರುವ ವಾಹನಗಳಿಗೆ ಕಲಿಕಾ ಪರವಾನಗಿಗಳನ್ನು ನೀಡಲಾಗುವುದಿಲ್ಲ ಎಂದು ಸಚಿವಾಲಯ ಪ್ರಸ್ತಾಪಿಸಿದೆ. ಈ ನಿಯಮಗಳ ಮೂಲಕ ರಸ್ತೆಯಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಬಾಲಾಪರಾಧಿಗಳ ಚಾಲನೆಯಿಂದ ಉಂಟಾಗುವ ಅಪಘಾತಗಳನ್ನು ತಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: 7th Pay Commission : ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಯಾವಾಗ ತುಟ್ಟಿ ಭತ್ಯೆ ಹೆಚ್ಚಳವಾಗಬಹುದು? ಇಲ್ಲಿದೆ ವಿವರ