Wednesday, 8th January 2025

Earthquake: ಟಿಬೆಟ್ ಭೂಕಂಪದ ಸಾವಿನ ಸಂಖ್ಯೆ 53ಕ್ಕೆ ಏರಿಕೆ- ಶಾಕಿಂಗ್‌ ವಿಡಿಯೊಗಳು ಭಾರೀ ವೈರಲ್‌

Earthquake

ಕಠ್ಮಂಡು : ಮಂಗಳವಾರ ಬೆಳಗ್ಗೆ ನೇಪಾಳ – ಟಿಬೆಟ್ ಗಡಿ (Nepal- Tibet) ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. (Earthquake) ಘಟನೆಯಲ್ಲಿ ಈವರೆಗೆ ಕನಿಷ್ಠ 53 ಮಂದಿ ಮೃತಪಟ್ಟಿದ್ದು, 62 ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.1 ರ ತೀವ್ರತೆಯ ಭೂಕಂಪ ದಾಖಲಾಗಿದೆ.  ಬಿಹಾರ ಮತ್ತು ಅಸ್ಸಾಂ ಸೇರಿದಂತೆ ಉತ್ತರ ಮತ್ತು ಈಶಾನ್ಯ ಭಾರತದಾದ್ಯಂತ ಕಂಪನದ ಅನುಭವವಾಗಿದೆ. ಜನರು ತಮ್ಮ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಹೊರಗೆ ಓಡುತ್ತಿರುವ ದೃಶ್ಯ ಕಂಡುಬಂದಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ಮನೆಯ ಛಾವಣಿ, ಫ್ಯಾನ್‌ಗಳು ಅಲುಗಾಡಿರುವುದು ಕಾಣಿಸುತ್ತದೆ.

ಮುಜಾಫರ್‌ಪುರ, ಮೋತಿಹಾರಿ, ಬೆಟ್ಟಿಯಾ, ಮುಂಗೇರ್, ಅರಾರಿಯಾ, ಸೀತಾಮರ್ಹಿ, ಗೋಪಾಲ್‌ಗಂಜ್, ವೈಶಾಲಿ, ನವಾಡ ಮತ್ತು ನಳಂದ ಜಿಲ್ಲೆಗಳಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಕಂಪನಗಳು ಸಂಭವಿಸಿದ್ದರಿಂದ ಆತಂಕಕ್ಕೊಳಗಾದ ಬಿಹಾರದ ನಿವಾಸಿಗಳು ತಮ್ಮ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಂದ ಹೊರಬಂದಿದ್ದಾರೆ.

ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯವಾಗಿದ್ದರೂ, ಇಂದಿನ ಭೂಕಂಪವು ಕಳೆದ ಐದು ವರ್ಷಗಳಲ್ಲಿ 200-ಕಿಲೋಮೀಟರ್ ತ್ರಿಜ್ಯದಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಕಂಪನವಾಗಿದೆ. ನೇಪಾಳವು ಪ್ರಮುಖ ಭೌಗೋಳಿಕ ದೋಷದ ರೇಖೆಯ ಮೇಲೆ ನೆಲೆಸಿದೆ, ಅಲ್ಲಿ ಭಾರತೀಯ ಟೆಕ್ಟೋನಿಕ್ ಪ್ಲೇಟ್ ಯುರೇಷಿಯನ್ ಪ್ಲೇಟ್‌ಗೆ ತಳ್ಳಿ ಹಿಮಾಲಯವನ್ನು ರೂಪಿಸುತ್ತದೆ.

ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ, ಹಲವು ಕಟ್ಟಡಗಳು ನೆಲಕ್ಕುರುಳಿವೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅವಶೇಷಗಳ ನಡುವೆ ಹಲವರು ಸಿಲುಕಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ : Earthquake: ನೇಪಾಳ-ಟಿಬೆಟ್‌ ಗಡಿ ಪ್ರದೇಶದಲ್ಲಿ ಪ್ರಬಲ ಭೂಕಂಪಕ್ಕೆ 36 ಜನ ಬಲಿ

Leave a Reply

Your email address will not be published. Required fields are marked *