ನವದೆಹಲಿ : ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರಾ ಮತ್ತು ಮಣಿಪುರ ರಾಜ್ಯಗಳ ಸಂಸ್ಥಾಪನ ದಿನ ಇಂದು. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಜನತೆಗೆ ಶುಭ ಹಾರೈಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿ ಮೇಘಾಲಯದ ಜನರಿಗೆ ರಾಜ್ಯೋತ್ಸವ ದಿನದಂದು ಶುಭಾಶಯ ಗಳು. ರಾಜ್ಯವು ರೋಮಾಂಚಕ ಸಂಸ್ಕೃತಿಗೆ ಹೆಸರುವಾಸಿಯಾಗಿದ್ದು, ವಿಶೇಷವಾಗಿ ಸಂಗೀತ, ಕಲೆ ಮತ್ತು ಕ್ರೀಡೆಗಳಿಲ್ಲಿ ಹೆಚ್ಚಿನ ಉತ್ಸಾಹ ಹೊಂದಿದ್ದಾರೆ. ಇಲ್ಲಿನ ಜನರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಮುಂಬರುವ ವರ್ಷಗಳಲ್ಲಿ ಮೇಘಾಲಯದ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ತ್ರಿಪುರಾದ ಜನತೆಗೂ ಶುಭ ಕೋರಿದ್ದು, ತ್ರಿಪುರಾದ ಬೆಳವಣಿಗೆಯ ಪಥಕ್ಕೆ ಕಳೆದ 5 ವರ್ಷಗಳು ಗಮನಾರ್ಹವಾಗಿವೆ. ಕೃಷಿಯಿಂದ ಕೈಗಾರಿಕೆಗೆ, ಶಿಕ್ಷಣದಿಂದ ಆರೋಗ್ಯಕ್ಕೆ, ರಾಜ್ಯವು ದೊಡ್ಡ ಪರಿವರ್ತನೆಯನ್ನು ಕಂಡಿದೆ. ಮುಂದಿನ ದಿನಗಳಲ್ಲಿಯೂ ಇದೇ ಟ್ರೆಂಡ್ ಮುಂದುವರೆಯಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಮಣಿಪುರದ ಜನತೆಗೆ ರಾಜ್ಯೋತ್ಸವ ದಿನದ ಶುಭಾಶಯಗಳು. ಕಳೆದ ಕೆಲವು ವರ್ಷಗಳಿಂದ ರಾಜ್ಯವು ಹಲವಾರು ಅಂಶಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಈ ರಾಜ್ಯದ ಜನರ ಆಕಾಂಕ್ಷೆಗಳು ಈಡೇರಲಿ, ಮಣಿಪುರವು ಭಾರತದ ಬೆಳವಣಿಗೆಯ ಪಥವನ್ನು ಬಲಪಡಿಸುತ್ತಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮೇಘಾಲಯ, ತ್ರಿಪುರಾ ಮತ್ತು ಮಣಿಪುರಕ್ಕೆ ಅವರ ರಾಜ್ಯೋತ್ಸವ ದಿನದಂದು ಶುಭಾಶಯಗಳನ್ನು ತಿಳಿಸಿದ್ದಾರೆ.