Monday, 25th November 2024

ED Raid: ʻಅತ್ತೆಗೆ ಕ್ಯಾನ್ಸರ್‌ ಇದೆ.. 4 ವಾರ ಟೈಂ ಕೊಡಿʼ- ED ರೇಡ್‌ ವೇಳೆ ಆಪ್‌ MLA ಹೈಡ್ರಾಮಾ; ಕೊನೆಗೂ ಅರೆಸ್ಟ್‌

ED Raid

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ(Money laundering case)ಕ್ಕೆ ಸಂಬಂಧಿಸಿದಂತೆ ಆಪ್‌ ಶಾಸಕ(AAP MLA) ಅಮಾನುತುಲ್ಲಾ ಖಾನ್‌(Amanatullah Khan) ಅವರ ನಿವಾಸ ಮೇಲೆ ಜಾರಿ ನಿರ್ದೇಶನಾಲಯ(Enforcement Directorate) ರೇಡ್‌(ED Raid) ಮಾಡಿದೆ. ದೆಹಲಿ ವಕ್ಫ್‌ ಬೋರ್ಡ್‌(Delhi Waqf Board) ನೇಮಕಾತಿ ಮತ್ತು ಅದರ ಆಸ್ತಿ ಭೋಗ್ಯಕ್ಕೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್‌  ಮನೆ ಮೇಲೆ ಇಡಿ ಇಂದು ಬೆಳ್ಳಂ ಬೆಳಗ್ಗೆ ರೇಡ್‌ ಮಾಡಿದೆ. ಬರೋಬ್ಬರಿ ಆರು ಗಂಟೆಗಳ ವಿಚಾರಣೆ ಬಳಿಕ ಅವರನ್ನು ಅರೆಸ್ಟ್‌ ಮಾಡಲಾಗಿದೆ. ಇನ್ನು ರೇಡ್‌ ವೇಳೆ ಭಾರೀ ಹೈಡ್ರಾಮಾವೂ ನಡೆಯಿತು.

ಇನ್ನು ದಾಳಿ ಆಗುತ್ತಿದ್ದಂತೆ ವಿಡಿಯೋ ಮೂಲಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಖಾನ್‌, ಇಡಿ ಅಧಿಕಾರಿಗಳು ನನ್ನನ್ನು ಅರೆಸ್ಟ್‌ ಮಾಡಲು ಬಂದಿದ್ದಾರೆ. ನನ್ನ ಮನೆಯಲ್ಲಿ ನನ್ನ ಅತ್ತೆ ಕ್ಯಾನ್ಸರ್‌ ರೋಗಿಯಾಗಿದ್ದಾರೆ. ಕೇವಲ ಎರಡು ದಿನಗಳ ಹಿಂದೆಯಷ್ಟೇ ಅವರ ಆಪರೇಷನ್‌ ನಡೆದಿದೆ.ಆಕೆ ಕೂಡ ನನ್ನ ಮನೆಯಲ್ಲಿದ್ದಾರೆ. ಇದನ್ನು ನಾನು ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಆದರೂ ಅವರು ಕೇಳದೇ ಮನೆಯಲ್ಲಿ ಬಂದು ಕುಳಿತಿದ್ದಾರೆ ಎಂದು ಹೇಳಿದ್ದಾರೆ.

ನನ್ನನ್ನು ಬಂಧಿಸುವುದೇ ಇಡಿಯ ಉದ್ದೇಶವಾಗಿದೆ. ಎರಡು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ, ಸುಳ್ಳು ಕೇಸುಗಳನ್ನು ಹಾಕಿ, ಸಮಸ್ಯೆ ಸೃಷ್ಟಿಸುತ್ತಿದ್ದಾರೆ, ಇಡೀ ಪಕ್ಷಕ್ಕೆ ಕಿರುಕುಳ ನೀಡುತ್ತಿದ್ದಾರೆ, ಪಕ್ಷವನ್ನು ಒಡೆಯುವುದೇ ಅವರ ಉದ್ದೇಶವಾಗಿದೆ, ಜನತೆಯಲ್ಲಿ ಮನವಿ ಮಾಡುತ್ತೇನೆ. ಓಖ್ಲಾ ನನಗಾಗಿ ಪ್ರಾರ್ಥಿಸಲು ಮತ್ತು ನಿಮ್ಮ ಎಲ್ಲಾ ಕೆಲಸಗಳನ್ನು ನಾವು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿ, ಚಿಂತಿಸಬೇಡಿ, ನಾವು ಹೆದರುವುದಿಲ್ಲ ಎಂದಿದ್ದಾರೆ.

ಖಾನ್ ಒಬ್ಬ ಇಡಿ ಅಧಿಕಾರಿಯೊಂದಿಗೆ ಮಾತನಾಡುತ್ತಿರುವಾಗ, ಹಾಸಿಗೆಯ ಮೇಲೆ ವಯಸ್ಸಾದ ಮಹಿಳೆಯೊಬ್ಬರು ಕುಳಿತಿರುವ ದೃಶ್ಯಗಳು ವಿಡಿಯೋದಲ್ಲಿ ಕಂಡುಬಂದಿವೆ. ನನಗೆ ನಾಲ್ಕು ವಾರಗಳ ಸಮಯ ಬೇಕು. ನನ್ನ ಅತ್ತೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಖಾನ್‌ ಅಧಿಕಾರಿಗಳಿಗೆ ಹೇಳುತ್ತಾರೆ. ಅಲ್ಲದೇ ಅಲ್ಲೇ ಮಹಿಳೆಯೊಬ್ಬರು ಆಕೆಗೆ ಕ್ಯಾನ್ಸರ್‌ ಇದೆ, ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಒಂದು ವೇಳೆ ಆಕೆಗೆ ಏನಾದರು ಸಂಭವಿಸಿದರೆ ನಿಮ್ಮನ್ನು ಕೋರ್ಟ್‌ಗೆ ಎಳೆಯುತ್ತೇನೆ ಎನ್ನುತ್ತಾಳೆ.

ಇನ್ನು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಆಪ್‌ ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಆಡಳಿತ ಪಕ್ಷದ ವಿರುದ್ಧ ಧ್ವನಿ ಎತ್ತುವವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
“ಇಡಿಯಿಂದ ಉಳಿದಿರುವ ಕೆಲಸ ಇದೊಂದೇ. ಬಿಜೆಪಿ ವಿರುದ್ಧ ಎತ್ತುವ ಪ್ರತಿ ಧ್ವನಿಯನ್ನು ಅಟ್ಟಡಗಿಸುವುದಾಗಿದೆ.ಇನ್ನು ಮುಂದುವರೆದರೆ ಅವರನ್ನು ಜೈಲಿನಲ್ಲಿ ಇರಿಸೋದಾಗಿದೆ ಎಂದು ಹೇಳಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://x.com/KhanAmanatullah/status/1830428733724901410