Friday, 10th January 2025

Elgar Parishad Case: ಎಲ್ಗಾರ್ ಪರಿಷತ್ ಪ್ರಕರಣ;ರೋನಾ ವಿಲ್ಸನ್ ಮತ್ತು ಸುಧೀರ್ ಧಾವಳೆಗೆ ಜಾಮೀನು!

ಮುಂಬೈ: ಎಲ್ಗಾರ್‌ ಪರಿಷತ್‌ನ(Elgar Parishad Case) ಪ್ರಮುಖ ಆರೋಪಿಗಳಾದ ರೋನಾ ವಿಲ್ಸನ್‌(Rona Wilson) ಮತ್ತು ಸುಧೀರ್‌ ಧಾವಳೆಗೆ(Sudhir Dhawale) ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದೆ.

2018 ರಲ್ಲಿ ಎಲ್ಗಾರ್‌ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶೋಧಕ ರೋನಾ ವಿಲ್ಸನ್ ಮತ್ತು ಕಾರ್ಯಕರ್ತ ಸುಧೀರ್ ಧವಳೆ ಅವರನ್ನು ಬಂಧಿಸಲಾಗಿತ್ತು. ಇದೀಗ ಇಬ್ಬರಿಗೂ ಬಾಂಬೆ ಹೈಕೋರ್ಟ್‌ ಜಾಮೀನು ನೀಡುವ ಮೂಲಕ ಆರು ವರ್ಷಗಳ ಪ್ರಕರಣಕ್ಕೆ ತೆರೆ ಎಳೆದಿದೆ. ನ್ಯಾಯಮೂರ್ತಿಗಳಾದ ಎಎಸ್ ಗಡ್ಕರಿ ಮತ್ತು ಕಮಲ್ ಖಾತಾ ಅವರ ಪೀಠವು ಆರೋಪಿಗಳ ದೀರ್ಘಾವಧಿಯ ಸೆರೆವಾಸವನ್ನು ಗಮನಿಸಿದ್ದು, ವಿಚಾರಣೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುವ ಸಾಧ್ಯತೆಯಿಲ್ಲ ಎಂದು ತಿಳಿದು ಜಾಮೀನು ನೀಡಿದೆ.

ಇಬ್ಬರೂ ಆರೋಪಿಗಳು 2018 ರಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಮತ್ತು ವಿಶೇಷ ನ್ಯಾಯಾಲಯವು ಆರೋಪಗಳನ್ನು ಸಾಬೀತು ಮಾಡಬೇಕಿದೆ ಎಂದು ರಕ್ಷಣಾ ವಕೀಲರಾದ ಮಿಹಿರ್ ದೇಸಾಯಿ ಮತ್ತು ಸುದೀಪ್ ಪಾಸ್ಬೋಲಾ ವಾದಿಸಿದ್ದರು. ವಿಲ್ಸನ್ ಮತ್ತು ಧವಳೆ ತಲಾ ₹ 1 ಲಕ್ಷದ ಶ್ಯೂರಿಟಿ ಸಲ್ಲಿಸುವಂತೆ ಮತ್ತು ವಿಚಾರಣೆಗಾಗಿ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಹಾಜರಾಗುವಂತೆ ಬಾಂಬೆ ಹೈಕೋರ್ಟ್‌ ಸೂಚಿಸಿದೆ. ಪ್ರಕರಣದಲ್ಲಿ 300 ಕ್ಕೂ ಹೆಚ್ಚು ಸಾಕ್ಷಿಗಳಿದ್ದು, ವಿಚಾರಣೆಯನ್ನು ಶೀಘ್ರದಲ್ಲೇ ಮುಕ್ತಾಯಗೊಳಿಸಲು ಸಾಧ್ಯವಿಲ್ಲ ಎಂದು ಪೀಠವು ಹೇಳಿದೆ.

ಡಿಸೆಂಬರ್‌ನಲ್ಲಿ, ತಲೋಜಾ ಕೇಂದ್ರ ಕಾರಾಗೃಹದಲ್ಲಿದ್ದ ಕಾರ್ಯಕರ್ತ ರೋನಾ ವಿಲ್ಸನ್ ಸಲ್ಲಿಸಿದ್ದ ತಾತ್ಕಾಲಿಕ ಜಾಮೀನು ಅರ್ಜಿಯನ್ನು ವಿಶೇಷ NIA ನ್ಯಾಯಾಲಯ ತಿರಸ್ಕರಿಸಿತ್ತು.

ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ ಪ್ರಕರಣ

ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಮರುದಿನ ಆಯೋಜಿಸಿದ್ದ ಕೋರೆಗಾಂವ್-ಭೀಮಾದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿ ಮಾಡಿದ ಪ್ರಚೋದನಕಾರಿ ಭಾಷಣಗಳಿಗೆ ಈ ಪ್ರಕರಣವು ಸಂಬಂಧಿಸಿದೆ. ಪುಣೆ ಪೊಲೀಸರು ಸಮಾವೇಶಕ್ಕೆ ಮಾವೋವಾದಿಗಳ(Naxals) ಬೆಂಬಲವಿದೆ ಎಂದು ಹೇಳಿದ್ದರು. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆಯನ್ನು ವಹಿಸಿಕೊಂಡಿತ್ತು. ಪ್ರಕರಣದಲ್ಲಿ ಬಂಧಿತರಾದ 16 ಮಂದಿಯ ಪೈಕಿ ಹಲವರು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.ರೋನಾ ವಿಲ್ಸನ್ ಅವರನ್ನು ಜೂನ್ 2018 ರಲ್ಲಿ ದೆಹಲಿಯ ಅವರ ಮನೆಯಿಂದಲೇ ಬಂಧಿಸಲಾಗಿತ್ತು. ಆತನನ್ನು ತನಿಖಾ ಸಂಸ್ಥೆಗಳು ನಗರ ಮಾವೋವಾದಿಗಳ ಪ್ರಮುಖ ನಾಯಕ ಎನ್ನಲಾಗಿತ್ತು.

ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಯ ಸಕ್ರಿಯ ಸದಸ್ಯ ಎಂದು ಆರೋಪಿಸಿ ಸುಧೀರ್ ಧಾವಳೆ ಬಂಧನಕ್ಕೊಳಗಾದವರಲ್ಲಿ ಮೊದಲಿಗರು.

ಈ ಸುದ್ದಿಯನ್ನೂ ಓದಿ:Punjab Serial Killer: 18 ತಿಂಗಳಲ್ಲಿ 11 ಕೊಲೆ; ಸರಣಿ ಹಂತಕನ ಕೃತ್ಯ ಬಯಲಾಗಿದ್ದು ಹೇಗೆ?

Leave a Reply

Your email address will not be published. Required fields are marked *