ನವದೆಹಲಿ: ಇಪಿಎಫ್‌ಒ (Employees’ Provident Fund Organisation) ನಿರಂತರವಾಗಿ ಉದ್ಯೋಗಿಗಳ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ. ಇದೀಗ ನವ ನವೀನ ಸಾಫ್ಟ್‌ವೇರ್ ಸಿಸ್ಟಮ್‌ಗಳನ್ನು ಒಳಗೊಂಡ ಇಪಿಎಫ್ಒ 3.0 ಅನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸರ್ಕಾರ (Centre Government) ಘೋಷಿಸಿದೆ (EPF Withdrawal).
ಈ ವರ್ಷದ ಮೇ-ಜೂನ್ ಒಳಗೆ ಇಪಿಎಫ್‌ಒ ಚಂದಾದಾರರಿಗೆ ಮೊಬೈಲ್ ಅಪ್ಲಿಕೇಶನ್ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸಲು ಸಿದ್ಧತೆ ನಡೆಯುತ್ತಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಸಂಪೂರ್ಣ ಐಟಿ ವ್ಯವಸ್ಥೆಯನ್ನು ನವೀಕರಿಸುವುದನ್ನು ಒಳಗೊಂಡಿರುವ ಇಪಿಎಫ್‌ಒ 2.0ರ ಕೆಲಸವು ಪ್ರಸ್ತುತ ನಡೆಯುತ್ತಿದ್ದು, ಜನವರಿ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದ್ದಾರೆ. ಇದರ ನಂತರ EPFO 3.0 ಅಪ್ಲಿಕೇಶನ್ ಅನ್ನು ಮೇ-ಜೂನ್ ವೇಳೆಗೆ ಪ್ರಾರಂಭಿಸಲಾಗುವುದು, EPFO ಚಂದಾದಾರರಿಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ನೀಡುತ್ತದೆ ಎಂಬ ಮಾಹಿತಿಯಿದೆ. ಜೂನ್‌ನಿಂದ ಜಾರಿಗೆ ಬರುವ ಈ ಹೊಸ ವ್ಯವಸ್ಥೆ ಬ್ಯಾಂಕಿಂಗ್ ವ್ಯವಸ್ಥೆಯಂತೆ ಕಾರ್ಯನಿರ್ವಹಿಸುತ್ತದೆ. ಅದರ ವೆಬ್‌ಸೈಟ್ ಹೆಚ್ಚು ಬಳಕೆದಾರ ಸ್ನೇಹಿಯಾಗಲಿದೆ ಎಂದು ಸರ್ಕಾರ ಹೇಳಿದೆ. ಈ ಮೂಲಕ ಯಾವುದೇ ತುರ್ತು ಸಂದರ್ಭದಲ್ಲಿ, ಇಪಿಎಫ್‌ಒ ಸದಸ್ಯರು ನಿಗದಿತ ಮಿತಿಯವರೆಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. EPFO 3.0 ಪ್ರಾರಂಭವಾದ ನಂತರ, EPFO ಸದಸ್ಯರಿಗೆ ATM ಕಾರ್ಡ್‌ಗಳನ್ನು ಒದಗಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಪಿಎಫ್ ಖಾತೆದಾರರು ಹಣ ಹಿಂಪಡೆಯುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸಿಸ್ಟಮ್ ಅನ್ನು ಅಪ್‌ಗ್ರೇಡ್ ಮಾಡಿದ ನಂತರ, ಹೆಸರಿನಲ್ಲಿ ತಪ್ಪು, ಆಧಾರ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಅಪ್‌ಡೇಟ್ ಮಾಡದಿರುವುದು ಮತ್ತು ಹಳೆಯ ಕಂಪನಿಯ ಪಿಎಫ್ ವರ್ಗಾವಣೆಯಾಗದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಐಟಿ ಸಿಸ್ಟಮ್ 2.01 ಅಡಿಯಲ್ಲಿ ವೆಬ್‌ಸೈಟ್ ಮತ್ತು ಸಿಸ್ಟಮ್ ಅನ್ನು ನವೀಕರಿಸುವ ಮೊದಲ ಹಂತವು 2025ರ ಜನವರಿ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಇದಾದ ನಂತರ ಯಾವುದೇ ಸಮಸ್ಯೆ ಇಲ್ಲದೆ ಪಿಎಫ್ ಖಾತೆಯಿಂದ ಹಣ ತೆಗೆಯಬಹುದು.
ಎಟಿಎಂನಲ್ಲಿ ಇಪಿಎಫ್ ಹಣ ಹಿಂಪಡೆಯಲು ಅವಕಾಶ
ಇಪಿಎಫ್ನಿಂದ ಹಣ ಹಿಂಪಡೆಯಬೇಕಾದರೆ ಪ್ರಸ್ತುತ ಕ್ಲೈಮ್ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯಾದ ನಂತರ 7ರಿಂದ 15 ದಿನದಲ್ಲಿ ಆ ಹಣ ಬ್ಯಾಂಕ್ ಖಾತೆಗೆ ರವಾನೆಯಾಗುತ್ತದೆ. ಆಗ ಆ ಹಣವನ್ನು ಹಿಂಪಡೆಯಬಹುದು. ಸರ್ಕಾರವು ಇದೀಗ ಈ ನಿಯಮದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಇಪಿಎಫ್ ಅಕೌಂಟ್ನಲ್ಲಿರುವ ಹಣವನ್ನು ನೇರವಾಗಿ ಎಟಿಎಂಗಳಲ್ಲಿ ವಿತ್ಡ್ರಾ ಮಾಡುವ ಅವಕಾಶ ಕಲ್ಪಿಸಲಿದೆ. ಅಂದರೆ ಯಾರೂ ಕ್ಲೈಮ್ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಇಪಿಎಫ್ಒದಿಂದ ಎಟಿಎಂ ರೀತಿಯ ಒಂದು ಕಾರ್ಡ್ ಅನ್ನು ನೀಡಲಾಗುತ್ತದೆ. ಅದನ್ನು ಎಟಿಎಂಗಳಲ್ಲಿ ಬಳಸಿ ಹಣ ಪಡೆಯಬಹುದು. ಇಪಿಎಫ್ ಅಕೌಂಟ್ನಲ್ಲಿ ಶೇ. 50ರಷ್ಟು ಮೊತ್ತದವರೆಗೆ ವಿತ್ಡ್ರಾ ಮಾಡಲು ಮಿತಿ ಹಾಕಲಾಗಿರುತ್ತದೆ. ಆದರೂ ಕೂಡ ತುರ್ತು ಸಂದರ್ಭದಲ್ಲಿ ಇದು ಬಹಳ ಉಪಯೋಗಕ್ಕೆ ಬರುತ್ತದೆ.
ಪೆನ್ಷನ್ ಅರ್ಜಿ ಅಪ್ಲೋಡ್ ಮಾಡಲು ಗಡುವು ವಿಸ್ತರಣೆ
ಅಧಿಕ ವೇತನಕ್ಕೆ ಸಂಬಂಧಿಸಿದ ಬಾಕಿ ಪಿಂಚಣಿ ಅರ್ಜಿಗಳನ್ನು ಅಪ್ಲೋಡ್ ಮಾಡಲು ಇದ್ದ ಗಡುವನ್ನು 2025ರ ಜನವರಿ 31ರವರೆಗೂ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ಅಪೂರ್ಣ ಮಾಹಿತಿ ಇದ್ದು ಅದನ್ನು ಅಪ್‌ಡೇಟ್ ಮಾಡಲು ಹಾಗೂ ಹೆಚ್ಚುವರಿ ಮಾಹಿತಿ ಸೇರಿಸುವ ಅವಶ್ಯಕತೆ ಇದ್ದರೆ ಅದನ್ನು ಮಾಡಲು ಜನವರಿ 15ರವರೆಗೆ ಕಾಲಾವಕಾಶ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ:Delhi Fog: ದಿಲ್ಲಿಯಲ್ಲಿ ಪ್ರತಿಕೂಲ ಹವಾಮಾನ; 100ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬ