Thursday, 12th December 2024

ಮಾಜಿ ಯೋಧ ತೇಜ್ ‌ಬಹದ್ದೂರ್‌ ಸಲ್ಲಿಸಿದ್ದ ಅರ್ಜಿ ’ಸುಪ್ರೀಂ’ನಲ್ಲಿ ವಜಾ

ನವದೆಹಲಿ: ಲೋಕಸಭಾ ಚುನಾವಣೆ(2019)ಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ತಿರಸ್ಕರಿಸಿದ ಚುನಾವಣಾ ಸಮಿತಿಯ ಕ್ರಮವನ್ನು ಪ್ರಶ್ನಿಸಿ ಮಾಜಿ ಯೋಧ ತೇಜ್‌ ಬಹದ್ದೂರ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾ ಮಾಡಿತು.

ಮುಖ್ಯ ನಾಯಮೂರ್ತಿ ಎಸ್‌.ಎ.ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್‌.ಬೊಪಣ್ಣ ಮತ್ತು ವಿ. ರಾಮಸುಬ್ರಮಣಿ ಯನ್ ಅವರಿದ್ದ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ನ.18ರಂದು ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ್ದು, ಅಲಹಾಬಾದ್ ಹೈಕೋರ್ಟ್‌ನ ಕ್ರಮವನ್ನು ಎತ್ತಿಹಿಡಿಯಿತು.

ಬಿಎಸ್‌ಎಫ್‌ನಿಂದ 2017ರಲ್ಲಿ ವಜಾಗೊಂಡಿದ್ದ ತೇಜ್‌ ಬಹದ್ದೂರ್, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಳೆದ ವರ್ಷದ ಮೇ 1 ರಂದು ನಾಮಪತ್ರ ಸಲ್ಲಿಸಿದ್ದರು. ಬಹಾದ್ದೂರ್ ಪರ ವಕೀಲರು, ತಮ್ಮ ಕಕ್ಷಿದಾರರರು ಮೊದಲು ಪಕ್ಷೇತರನಾಗಿ, ನಂತರ ಎಸ್‌.ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು ಎಂದು ಪ್ರತಿಪಾದಿಸಿದ್ದರು.

ಅರ್ಜಿಯಲ್ಲಿ ತೇಜ್ ಬಹದ್ದೂರ್ ಅವರು, ನಾಮಪತ್ರ ತಿರಸ್ಕರಿಸಿದ ಚುನಾವಣಾಧಿಕಾರಿಗಳ ಕ್ರಮವನ್ನು ರದ್ದುಪಡಿಸಬೇಕು ಹಾಗೂ ತಮ್ಮ ಪ್ರತಿವಾದಿ (ನರೇಂದ್ರ ಮೋದಿ) ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿದ್ದರು.