Monday, 23rd December 2024

V Ramasubramanian: ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಗೆ ಅಧ್ಯಕ್ಷರಾದ ರಾಮಸುಬ್ರಮಣ್ಯನ್‌!

Ex Supreme Court Judge V Ramasubramanian Appointed National Human Rights Commission Panel Chief

ನವದೆಹಲಿ: ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ವಿ ರಾಮಸುಬ್ರಮಣ್ಯನ್‌ ಅವರನ್ನು (V Ramasubramanian) ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ಜೂನ್‌ ತಿಂಗಳಿನಿಂದಲೂ ಈ ಹುದ್ದೆ ಖಾಲಿ ಇತ್ತು. ಇದೀಗ ತಮಿಳುನಾಡು ಮೂಲದ ಮಾಜಿ ನ್ಯಾಯಾಧೀಶ ಈ ಸ್ಥಾನವನ್ನು ತುಂಬಿದ್ದಾರೆ.

ಎನ್‌ಎಚ್‌ಆರ್‌ಸಿ ಅಧ್ಯಕ್ಷ ಹುದ್ದೆಗೆ ಸರ್ಕಾರದ ಪಟ್ಟಿಯಲ್ಲಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಾ ಡಿ ವೈ ಚಂದ್ರಚೂಡ್ ಅವರ ಹೆಸರೂ ಕೇಳಿ ಬಂದಿತ್ತು. ಆದರೆ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ವಿ ರಾಮಸುಬ್ರಮಣ್ಯನ್‌ ಅವರನ್ನು ಈ ಹುದ್ದೆಗೆ ನೇಮಿಸಲಾಯಿತು. ಅಂದ ಹಾಗೆ ವಿ ರಾಮಸುಬ್ರಮಣ್ಯಂ 2023ರ ಜೂನ್‌ 29 ರಂದು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾಗಿದ್ದರು.

ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯು ಜೂನ್ 1 ರಂದು ಪೂರ್ಣಗೊಂಡಿತು, ನಂತರ ಎನ್‌ಎಚ್‌ಆರ್‌ಸಿ ಅಧ್ಯಕ್ಷರ ಹುದ್ದೆ ಖಾಲಿಯಾಗಿತ್ತು. ನ್ಯಾಯಮೂರ್ತಿ ಅರುಣ್ ಮಿಶ್ರಾ ನಂತರ, ಎನ್‌ಎಚ್‌ಆರ್‌ಸಿ ಸದಸ್ಯೆ ವಿಜಯ ಭಾರತಿ ಸಯಾನಿ ಅವರನ್ನು ಎನ್‌ಎಚ್‌ಆರ್‌ಸಿಯ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ ನ್ಯಾಯಮೂರ್ತಿ ವಿ ರಾಮಸುಬ್ರಮಣ್ಯನ್‌ ಅವರ ನೇಮಕದೊಂದಿಗೆ ಸುಮಾರು 6 ತಿಂಗಳ ನಂತರ ಎನ್‌ಎಚ್‌ಆರ್‌ಸಿ ಮತ್ತೆ ಖಾಯಂ ಅಧ್ಯಕ್ಷರನ್ನು ಪಡೆದುಕೊಂಡಿದೆ.

ನ್ಯಾಯಮೂರ್ತಿ ವಿ.ರಾಮಸುಬ್ರಮಣ್ಯನ್‌ ಯಾರು?

ನ್ಯಾಯಮೂರ್ತಿ ವಿ ರಾಮಸುಬ್ರಮಣ್ಯನ್‌ ಅವರು 1958ರಲ್ಲಿ ಚೆನ್ನೈನಲ್ಲಿ ಜನಿಸಿದ್ದರು. ಅವರು ಚೆನ್ನೈನ ರಾಮಕೃಷ್ಣ ಮಿಷನ್ ವಿವೇಕಾನಂದ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದರು ಮತ್ತು ನಂತರ ಮದ್ರಾಸ್ ಕಾನೂನು ಕಾಲೇಜಿನಲ್ಲಿ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸಿದ್ದರು.

ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ನ್ಯಾಯಮೂರ್ತಿ ವಿ ರಾಮಸುಬ್ರಮಣ್ಯಂ ಅವರು 1983ರ ಫೆಬ್ರವರಿ 16 ರಂದು ಬಾರ್ ಕೌನ್ಸಿಲ್ ಸದಸ್ಯರಾಗಿ ದಾಖಲಾದ ನಂತರ ಮದ್ರಾಸ್ ಹೈಕೋರ್ಟ್‌ನಲ್ಲಿ ಸುಮಾರು 23 ವರ್ಷಗಳ ಕಾಲ ಅಭ್ಯಾಸ ಮಾಡಿದ್ದರು. 1983 ರಿಂದ 1987ರ ಈ ಅವಧಿಯಲ್ಲಿ ಹಿರಿಯ ವಕೀಲರಾದ ಕೆ ಸಾರ್ವಭೌಮಣ್ಣ ಮತ್ತು ಟಿ ಆರ್ ಮಣಿ ಅವರೊಂದಿಗೆ ಕೆಲಸ ಮಾಡಿದ್ದರು.

ಅವರು 2006ರ ಜುಲೈ 31 ರಂದು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಇದರ ನಂತರ ಅವರು 2009ರ ನವೆಂಬರ್ 9 ರಂದು ಕಾಯಂ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದರು. 2016ರ ಏಪ್ರಿಲ್ 27 ರಂದು ಅವರನ್ನು ಹೈದರಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು ಮತ್ತು ತೆಲಂಗಾಣ ಮತ್ತು ಆಂಧ್ರಪ್ರದೇಶದ ನ್ಯಾಯಮಂಡಳಿಯಾಗಿ ಅಧಿಕಾರ ವಹಿಸಿಕೊಂಡರು.

ಈ ಸುದ್ದಿಯನ್ನು ಓದಿ: Supreme Court: ರೈತರ ಬೇಡಿಕೆ ಆಲಿಸಲು ಸದಾ ಸಿದ್ಧ; ಸುಪ್ರೀಂ ಕೋರ್ಟ್‌ ಭರವಸೆ