ನವದೆಹಲಿ: ಆಗ್ನೇಯ ದೆಹಲಿಯಲ್ಲಿನ ನೇತ್ರ ಚಿಕಿತ್ಸಾಲಯದಲ್ಲಿ ಬುಧವಾರ ಭಾರಿ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ.
‘ನೇತ್ರಾಲಯದ ನೆಲಮಹಡಿಯಲ್ಲಿ ಅಳವಡಿಸಿದ್ದ ಹವಾ ನಿಯಂತ್ರಣ ಉಪಕರಣ(ಎ.ಸಿ)ಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ.
ಈ ವೇಳೆ ನೇತ್ರಾಲಯದ ಪಕ್ಕದ ಕಟ್ಟಡದ 3ನೇ ಮಹಡಿಯಲ್ಲಿದ್ದ ಹೋಟೆಲ್‌ಗೂ ಬೆಂಕಿ ವ್ಯಾಪಿಸಿದೆ. ಒಟ್ಟಾರೆ ಘಟನೆಯಲ್ಲಿ ಯಾವುದೇ ಅಪಾಯಗಳು ಸಂಭವಿಸಿಲ್ಲ’ ಎಂದು ದೆಹಲಿ ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ 11.30ರ ರಿಂಗ್ ರಸ್ತೆಯಲ್ಲಿರುವ ಐ7 ಚೌಧರಿ ನೇತ್ರಾಲಯದಲ್ಲಿ ಅಗ್ನಿ ಅನಾಹುತ ಸಂಭವಿಸಿರುವ ಬಗ್ಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿತ್ತು. ತಕ್ಷಣವೇ ಅಗ್ನಿಶಾಮಕ ದಳದ 12 ತುಕಡಿಗಳು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ಆರಂಭಿಸಿದ್ದರು. ಬಳಿಕ ಹೆಚ್ಚುವರಿ 8 ತಂಡಗಳು ತೆರಳಿ, ಮಧ್ಯಾಹ್ನ 1.30ರ ಸುಮಾರಿಗೆ ಬೆಂಕಿಯನ್ನು ನಂದಿಸಿದ್ದಾರೆ.
ನೇತ್ರಾಲಯಲ್ಲಿದ್ದ ಎಲ್ಲ ಪೀಠೋಪಕರಣ ಹಾಗೂ ಯಂತ್ರೋಪಕರಣ ಸುಟ್ಟು ಕರಕಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.