Saturday, 23rd November 2024

ಫೇಸ್‌ಬುಕ್‌ಗೆ ಉತ್ತರಾಖಂಡ ಹೈಕೋರ್ಟ್ 50 ಸಾವಿರ ರೂ. ದಂಡ

ನೈನಿತಾಲ್(ಉತ್ತರಾಖಂಡ): ಫೇಸ್‌ಬುಕ್ ಮೂಲಕ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿ ಫೇಸ್‌ಬುಕ್‌ಗೆ ಉತ್ತರಾಖಂಡ ಹೈ ಕೋರ್ಟ್ 50 ಸಾವಿರ ರೂ. ದಂಡ ವಿಧಿಸಿದೆ.

ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಆರ್‌.ಸಿ. ಖುಲ್ಬೆ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಮಾಡಿದ್ದು, ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ಫೆಬ್ರುವರಿ 16ರ ಹೊಸ ಗಡುವು ವಿಧಿಸಿದೆ.

ನಕಲಿ ಖಾತೆ ಸೃಷ್ಟಿಸಿ ಆ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸುಲಿಗೆ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅಶ್ಲೀಲ ಎಡಿಟೆಡ್ ವಿಡಿಯೊ ಮತ್ತು ಚಿತ್ರಗಳನ್ನು ಈ ಖಾತೆಗಳಲ್ಲಿ ಪೋಸ್ಟ್ ಮಾಡಿ, ಲಕ್ಷಾಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು ಎಂಬ ಆರೋಪಗಳೂ ಕೇಳಿಬಂದಿವೆ.

ನಕಲಿ ಖಾತೆಗಳಿಂದ ತೊಂದರೆಗೀಡಾಗಿದ್ದ ಹರಿದ್ವಾರದ ನಿವಾಸಿ ಅಲೋಕ್ ಕುಮಾರ್ ಪಿಐಎಲ್ ಸಲ್ಲಿಸಿದ್ದರು.

ಮೊದಲಿಗೆ, ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗುತ್ತದೆ. ಬಳಿಕ, ಚಿತ್ರಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಎಡಿಟ್ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ವಕೀಲ ಅಭಿಜಯ್ ನೇಗಿ ಹೇಳಿದ್ದಾರೆ.