Thursday, 19th December 2024

Fact Check: ಅಂಬೇಡ್ಕರ್‌ ಬಗ್ಗೆ ರಾಜ್ಯಸಭೆಯಲ್ಲಿ ನಿಜಕ್ಕೂ ಅಮಿತ್ ಶಾ ಹೇಳಿದ್ದೇನು? ಇಲ್ಲಿದೆ ಒರಿಜಿನಲ್‌ ವಿಡಿಯೊ

ಹೊಸದಿಲ್ಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ (Amit Shah) ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ದೇಶಾದ್ಯಂತ ಕೋಲಾಹಲ ಎಬ್ಬಿದೆ. ವಿಪಕ್ಷ ನಾಯಕರು ಸಂಸತ್ತಿನ ಹೊರಗೆ ಉಗ್ರ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಹೋರಾಟ ನಡೆಸಿದ್ದಾರೆ. ಇತ್ತ ಬಿಜೆಪಿ ಸಂಸದರೂ ಕೂಡ ಘೋಷಣೆ ಕೂಗಿ ಅಂಬೇಡ್ಕರ್‌ ಅವರನ್ನು ನೆಹರೂ ಮತ್ತು ಕಾಂಗ್ರೆಸ್‌ ಅವಮಾನಿಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ವಿಪಕ್ಷಗಳು ತಿರುಚಿದ ವಿಡಿಯೊ ಬಿಡುಗಡೆ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ. ಈ ವಿಚಾರದಲ್ಲಿ ಸಂಸತ್ತಿನ ಹೊರಗೆ ಹೈಡ್ರಾಮವೇ ನಡೆದಿದೆ. ಹಾಗಾದರೆ ಅಮಿತ್‌ ಶಾ ನಿಜವಾಗಿಯೂ ಹೇಳಿದ್ದೇನು? ಇಲ್ಲಿದೆ ವಿವರ (Fact Check).

ಅಮಿತ್‌ ಶಾ ಅವರನ್ನು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅಮಿತ್‌ ಶಾ ಅವರು ಕಾಂಗ್ರೆಸ್‌ನ ಕರಾಳ ಇತಿಹಾಸ ತೆರೆದಿಟ್ಟಿದ್ದಾರೆ. ಹಲವು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಶಕ್ತೀಕರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ನಿಜವಾಗಿಯೂ ಅಮಿತ್‌ ಶಾ ಹೇಳಿದ್ದೇನು?

ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ನಡೆದ ಚರ್ಚೆಯ ವೇಳೆ ರಾಜ್ಯಸಭೆಯನ್ನು ಉದ್ದೇಶಿಸಿ ಅಮಿತ್‌ ಶಾ ಮಾತನಾಡಿ, ʼʼಅಂಬೇಡ್ಕರ್‌, ಅಂಬೇಡ್ಕರ್‌ ಎನ್ನುವುದು ಈಗ ಫ್ಯಾಷನ್‌ ಆಗಿದೆ. ಇಷ್ಟು ಬಾರಿ ದೇವರ ಹೆಸರನ್ನು ಜಪ ಮಾಡಿದ್ದರೆ 7 ಜನ್ಮದಲ್ಲಿ ನಿಮಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼʼ ಎಂದು ಹೇಳಿದ್ದರು. ಮುಂದುವರಿದು, “ಅವರ ಹೆಸರನ್ನು 100 ಸಲ ಬೇಕಿದ್ದರೂ ಹೇಳಿ. ಆದರೆ ಅವರ ಬಗ್ಗೆ ನಿಮ್ಮ ಭಾವನೆ ಏನು ಎಂದು ನಾನು ಹೇಳಲು ಬಯಸುತ್ತೇನೆ. ಜವಾಹರ್‌ಲಾಲ್‌ ನೆಹರೂ ನೇತೃತ್ವದ ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯದಿಂದ ಅವರು ಮೊದಲ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಗ್ಗೆ ನಡೆದುಕೊಳ್ಳುವ ರೀತಿಯ ಬಗ್ಗೆ ತೃಪ್ತಿ ಇಲ್ಲ ಎಂದು ಅಂಬೇಡ್ಕರ್ ಅವರೇ ಹಲವು ಬಾರಿ ಹೇಳಿದ್ದರು. ಸರ್ಕಾರದ ವಿದೇಶಾಂಗ ನೀತಿಗಳ ಬಗ್ಗೆ, ಆರ್ಟಿಕಲ್‌ 370ರ ಬಗೆಗಿನ ನಿಲುವಿನ ಬಗ್ಗೆ ಅಂಬೇಡ್ಕರ್‌ ಅಸಮಾಧಾನ ಹೊಂದಿದ್ದರು. ಅವರಿಗೆ ನೀಡಿದ್ದ ಭರವಸೆಯನ್ನು ಈಡೇರಿಸದ ಕಾರಣ ಅವರು ರಾಜೀನಾಮೆ ನೀಡಿದ್ದರು,” ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ಹೇಳಿಕೆಯನ್ನು ತಿರುಚಿದ ವಿಡಿಯೊವನ್ನು ಕಾಂಗ್ರೆಸ್‌ ರಿಲೀಸ್‌ ಮಾಡಿದೆ. ಅದರಲ್ಲಿ ʼʼಅಂಬೇಡ್ಕರ್‌, ಅಂಬೇಡ್ಕರ್‌, ಅಂಬೇಡ್ಕರ್‌ ಎನ್ನುವುದು ಈಗ ಫ್ಯಾಷನ್‌ ಆಗಿಬಿಟ್ಟಿದೆ. ನೀವೇನಾದರೂ ಇಷ್ಟು ಬಾರಿ ದೇವರ ಹೆಸರನ್ನು ಹೇಳಿದ್ದರೆ 7 ಜನ್ಮದಲ್ಲಿ ನಿಮಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼʼ ಎಂದಿರುವುದಷ್ಟೇ ಕಂಡು ಬಂದಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದ ಕೈ ಪಡೆ, ʼʼಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ಅಪಾರ ದ್ವೇಷವಿದೆ ಎಂಬುದನ್ನು ಇದು ತೋರಿಸುತ್ತದೆ. ಇವರ ಪೂರ್ವಜರು ಬಾಬಾ ಸಾಹೇಬರ ಪ್ರತಿಕೃತಿಯನ್ನು ದಹಿಸುತ್ತಿದ್ದರು. ಬಾಬಾ ಸಾಹೇಬರು ನೀಡಿದ ಸಂವಿಧಾನವನ್ನು ಬದಲಾಯಿಸುವ ಬಗ್ಗೆಯೂ ಇವರು ಮಾತನಾಡಿದ್ದಾರೆ. ಈಗ ಇವರು ಬಾಬಾ ಸಾಹೇಬರ ಹೆಸರು ಹೇಳುವವರ ವಿರುದ್ಧ ಕಿಡಿಕಾರಿದ್ದಾರೆ. ಇದು ಅವಮಾನಕರ. ಅಮಿತ್‌ ಶಾ ಇದಕ್ಕಾಗಿ ದೇಶದ ಜನರ ಕ್ಷಮೆಯಾಚಿಸಬೇಕು” ಎಂದು ಹೇಳಿದೆ.

ತಮ್ಮ 85 ನಿಮಿಷದ ಭಾಷಣದ 11 ಸೆಕೆಂಡ್‌ಗಳ ಭಾಗವನ್ನು ಎಡಿಟ್‌ ಮಾಡಿ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್‌ನ ತಿರುಚಿದ ವಿಡಿಯೊಕ್ಕೆ ಬಿಜೆಪಿ ತಿರುಗೇಟು ನೀಡಿದೆ.

ಈ ಸುದ್ದಿಯನ್ನೂ ಓದಿ: Amit Shah: ಅಂಬೇಡ್ಕರ್‌ ವಿರೋಧಿ ಕಾಂಗ್ರೆಸ್‌ನಿಂದ ಸುಳ್ಳು ಮಾಹಿತಿ; ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ಅಮಿತ್‌ ಶಾ ಹೇಳಿದ್ದೇನು?