Friday, 22nd November 2024

ಪ್ರತಿಧ್ವನಿಸಿದ ಕೃಷಿ ಕಾನೂನು, ರೈತರ ಹೋರಾಟ: ಕಲಾಪ ಮುಂದೂಡಿಕೆ

ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ‘ಕೃಷಿ ಕಾನೂನು’ ಮತ್ತು ರೈತರ ಹೋರಾಟ ಪ್ರತಿಧ್ವನಿಸಿದ್ದು, ಸಂಸತ್ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಕೃಷಿ ಕಾನೂನು ಮತ್ತು ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ವಿಪಕ್ಷಗಳು ಸಭಾತ್ಯಾಗ ಮಾಡಿದವು. ಚರ್ಚಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ಗದ್ದಲ, ಕೋಲಾಹಲ ವೆಬ್ಬಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಬಜೆಟ್ ಮಂಡನೆಯ ಒಂದು ದಿನದ ಬಳಿಕ ಬೆಳಗ್ಗೆ ರಾಜ್ಯಸಭೆಯ ಕಲಾಪ ಆರಂಭಗೊಂಡಿತು. ಆರಂಭದಲ್ಲಿ ವಿರೋಧ ಪಕ್ಷಗಳು ರೈತರ ಪ್ರತಿಭಟನೆಯ ಬಗ್ಗೆ ಚರ್ಚಿಸಲು ನಿಲುವಳಿಯೊಂದನ್ನು ಮಂಡಿಸಿತು. ಆದರೆ ನಾಳೆ ಅವಕಾಶ ನೀಡುತ್ತೇನೆ ಎಂದು ಸಭಾಪತಿ ವೆಂಕಯ್ಯನಾಯ್ಡು ತಿಳಿಸಿದರು. ಆದರೆ ವಿಪಕ್ಷ ಸದಸ್ಯರು ಘೋಷಣೆ ಕೂಗಿ, ತಕ್ಷಣ ಕೃಷಿ ಕಾಯ್ದೆಗಳನ್ನು ರದ್ದುಪಡಿಸ ಬೇಕು ಎಂದು ಒತ್ತಾಯಿಸಿದರು.

ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ವೆಂಕಯ್ಯ ನಾಯ್ಡು ಅವರು, ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ರೈತರ ಆಂದೋಲನ ವನ್ನು ಉಲ್ಲೇಖಿಸಿದ್ದಾರೆ ಎಂದರು.

ಇನ್ನು ಅತ್ತ ಸಭಾಧ್ಯಕ್ಷರು ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸದಸ್ಯರು ಸಭಾ ತ್ಯಾಗ ಮಾಡಿದರು. ಪ್ರತಿಭಟನೆ ಮುಂದುವರೆಸಿದ ಹಿನ್ನಲೆಯಲ್ಲಿ ವೆಂಕಯ್ಯ ನಾಯ್ಡು ಅವರು 2 ಬಾರಿ ಸದನವನ್ನು ಮುಂದೂಡಿ ದರು. ಮತ್ತೆ ಕಲಾಪ ಸೇರಿದಾಗಲೂ ಅದೇ ಪರಿಸ್ಥಿತಿ ಮುಂದುವರಿದಿದ್ದರಿಂದ ಕಲಾಪವನ್ನು ನಾಳೆ 9 ಗಂಟೆಗೆ ಮುಂದೂಡ ಲಾಯಿತು.