Friday, 22nd November 2024

ರೈತರ ಪ್ರತಿಭಟನೆಗೆ ದೆಹಲಿ ಚಳಿ ಅಡ್ಡಿ

ನವದೆಹಲಿ: ದೆಹಲಿಯಲ್ಲಿನ ತಾಪಮಾನ ಶುಕ್ರವಾರ 1 ಡಿಗ್ರಿಗಿಂತಲೂ ಕಡಿಮೆಯಾದ್ದರಿಂದ ಕೊರೆಯುವ ಚಳಿಯಲ್ಲಿ ಪ್ರತಿಭಟನಾ ನಿರತ ರೈತರು ತಮ್ಮ ಟೆಂಟ್ ಗಳ ಒಳಗೆ ಕುಳಿತುಕೊಳ್ಳುವಂತಾಯಿತು.

ಬೆಲೆ ಏರಿಕೆ ಮತ್ತು ಕೋಲು ಸುಡುವಿಕೆ ಮೇಲೆ ದಂಡ ಹೇರುವ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಕೇಂದ್ರ ಸರ್ಕಾರ ರೈತರಿಗೆ ಆಶ್ವಾಸನೆ ನೀಡಿದೆ. ಆದರೆ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ನೀಡುವ ಮುಖ್ಯ ಬೇಡಿಕೆಗಳಿಗೆ ಸಹಮತಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರಿದಿದೆ. ಕಳೆದ ಬುಧವಾರ ನಡೆಸಿದ ಮಾತುಕತೆ ಕೂಡ ವಿಫಲವಾಗಿದ್ದು, ಮುಂದಿನ ಮಾತುಕತೆ ಜನವರಿ 4ರಂದು ನಡೆಯಲಿದೆ.

6ನೇ ಸುತ್ತಿನ ಮಾತುಕತೆಯಲ್ಲಿ ಶೇಕಡಾ 50ರಷ್ಟು ಸಹಮತಕ್ಕೆ ಬರಲಾಗಿದ್ದು ನಾಲ್ಕು ವಿಷಯಗಳಲ್ಲಿ ಎರಡು ವಿಚಾರಗಳ ಮೇಲೆ ಪರಸ್ಪರ ಒಪ್ಪಂದಕ್ಕೆ ಬರಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ತಿಳಿಸಿದ್ದಾರೆ.

ನೂರಾರು ಮಂದಿ ಪೊಲೀಸರನ್ನು ಸಿಂಘು, ಗಝಿಪುರ್, ಟಿಕ್ರಿ ಗಡಿಭಾಗಗಳಲ್ಲಿ ನಿಯೋಜಿಸಲಾಗಿದೆ. ಕಳೆದೊಂದು ತಿಂಗಳಿಂದ ಇಲ್ಲಿ ಪೊಲೀಸರು ತೀವ್ರವಾಗಿ ಪ್ರತಿಭಟನಾ ನಿರತರಾಗಿದ್ದು, ಪ್ರತಿಭಟನೆಯಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ.  ಪೊಲೀಸರು ವಾಹನ ಸಂಚಾರರಿಗೆ ಬದಲಿ ಮಾರ್ಗಗಳನ್ನು ಸೂಚಿಸುವ ಅನಿವಾರ್ಯತೆ ಎದುರಾಗಿದೆ.