Wednesday, 8th January 2025

Farmers Protest: ಪಂಜಾಬ್‌ ಬಂದ್‌ಗೆ ಕರೆ ಕೊಟ್ಟ ರೈತರು, ಹಲವೆಡೆ ಸಂಚಾರಕ್ಕೆ ತೊಂದರೆ

Farmers Protest

ಚಂಡೀಗಢ : ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್‌ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. (Farmers Protest) ಪ್ರತಿಭಟನೆಯ ಅಂಗವಾಗಿ ರೈತರು ಪಂಜಾಬ್‌ ಬಂದ್‌ಗೆ (Punjab Bandh) ಕರೆ ನೀಡಿದ್ದಾರೆ. ಬಂದ್‌ನ ಅಂಗವಾಗಿ ಸೋಮವಾರ ರಾಜ್ಯದ ಹಲವೆಡೆ ರೈತರು ರಸ್ತೆ ತಡೆ ನಡೆಸಿದ್ದರಿಂದ ಬೆಳಗ್ಗೆಯೇ ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯುಂಟಾಯಿತು ಹಾಗೂ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ಕನಿಷ್ಠ ಬೆಂಬಲ ಬೆಲೆ (MSP)ಗೆ ಕಾನೂನು ಖಾತರಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬೆಳಿಗ್ಗೆ 7 ರಿಂದ ಸಂಜೆ 4ರವರೆಗೆ ಪಂಜಾಬ್‌ ಬಂದ್‌ಗೆ ಕರೆ ನೀಡಿದ್ದವು. ರಾಜ್ಯದಾದ್ಯಂತ 200 ಕ್ಕೂ ಹೆಚ್ಚು ಸ್ಥಳಗಳು ಹಾಗೂ ರಸ್ತೆಗಳನ್ನು ತಡೆಯಲಾಗಿದೆ. ಅಮೃತಸರದಲ್ಲಿ, ಪ್ರತಿಭಟನಾಕಾರರು ಗೋಲ್ಡನ್ ಗೇಟ್ ಎಂಟ್ರಿಡ್ ಪಾಯಿಂಟ್ ಬಳಿ ಜಮಾಯಿಸಿದರೆ, ಬಟಿಂಡಾದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಬಂದ್‌ ಬಗ್ಗೆ ಮಾತನಾಡಿ ಸಂಪೂರ್ಣ ಬಂದ್ ಇದ್ದರೂ ತುರ್ತು ಸೇವೆಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದರು. ಬೆಳಗ್ಗೆ 7 ರಿಂದ ಸಂಜೆ 4 ರವರೆಗೆ ಬಂದ್ ಆಚರಿಸಲಾಗುತ್ತದೆ. ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತವೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಅಥವಾ ಯಾರಾದರೂ ಉದ್ಯೋಗ ಸಂದರ್ಶನದಲ್ಲಿ ಭಾಗವಹಿಸಲು ಹೋಗುವವರು, ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಇತ್ಯಾದಿ ಅಗತ್ಯ ಇರುವವರಿಗೆ ಸಮಸ್ಯೆಯಾಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.

35ನೇ ದಿನಕ್ಕೆ ಕಾಲಿಟ್ಟ ಜಗ್‌ಜೀತ್‌ ಸಿಂಗ್‌ ದಲ್ಲೆವಾಲ್‌ ಉಪವಾಸ ಸತ್ಯಾಗ್ರಹ

ಏತನ್ಮಧ್ಯೆ ರೈತ ಮುಖಂಡ ಜಗ್‌ಜೀತ್‌ ಸಿಂಗ್‌ ದಲ್ಲೆವಾಲ್‌ ಅವರ ಉಪವಾಸ ಸತ್ಯಾಗ್ರಹ 35ನೇ ದಿನಕ್ಕೆ ಕಾಲಿಟ್ಟಿದೆ. 70ರ ಹರೆಯದ ದಲ್ಲೆವಾಲ್ ಅವರು ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ್ದು, ಸರಕಾರ ರೈತರ ಬೇಡಿಕೆಗಳನ್ನು ಒಪ್ಪುವವರೆಗೂ ಉಪವಾಸ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ರೈತರ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ನೀಡುವವರೆಗೂ ಉಪವಾಸ ಮುರಿಯುವುದಿಲ್ಲ ಎಂದು ದಲ್ಲೆವಾಲ್ ಹೇಳಿದ್ದರು. ದಲ್ಲೆವಾಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಮನವೊಲಿಸಲು ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಕ್ಕೆ ಡಿಸೆಂಬರ್ 31 ರವರೆಗೆ ಸಮಯ ನೀಡಿದೆ, ಅಗತ್ಯವಿದ್ದರೆ ಕೇಂದ್ರದಿಂದ ತಾತ್ವಿಕ ಬೆಂಬಲವನ್ನು ಪಡೆಯಲು ರಾಜ್ಯಕ್ಕೆ ಸ್ವಾತಂತ್ರ್ಯವನ್ನು ನೀಡಿದೆ.

ಪಂಜಾಬ್‌ ಹರಿಯಾಣದ ರೈತರು ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು MSP ಗ್ಯಾರಂಟಿ ಜೊತೆಗೆ, ರೈತರು ಸಾಲ ಮನ್ನಾ, ಪಿಂಚಣಿ, ವಿದ್ಯುತ್ ದರಗಳಲ್ಲಿ ಹೆಚ್ಚಳ ಮಾಡಬಾರದು. ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ : Farmers Protest: ರೈತರ ಪ್ರತಿಭಟನೆ; ರಸ್ತೆ ತೆರವಿಗೆ ಕೋರಿ ಅರ್ಜಿ ಸಲ್ಲಿಕೆ- ಸುಪ್ರೀಂ ಕೋರ್ಟ್ ಫುಲ್‌ ಗರಂ