Thursday, 12th December 2024

ಡೆಲ್ಟಾ ಪ್ಲಸ್ ರೂಪಾಂತರಕ್ಕೆ ಮೊದಲ ಬಲಿ, ಯುವತಿ ಸಾವು

ಭೋಪಾಲ್‌: ಮಧ್ಯ ಪ್ರದೇಶದಲ್ಲಿ ಕರೋನಾ ವೈರಸ್ ನ ಡೆಲ್ಟಾ ಪ್ಲಸ್ ರೂಪಾಂತರಕ್ಕೆ ಮೊದಲ ಬಲಿಯಾಗಿದೆ. 23 ವರ್ಷದ ಯುವತಿ ಮೃತಪಟ್ಟಿದ್ದಾಳೆ.

ಕರೋನಾ ರೂಪಾಂತರ ತಳಿ ಡೆಲ್ಟಾ ಪ್ಲಸ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವಾಗಲೇ ಯುವತಿಯೊಬ್ಬರು ಡೆಲ್ಟಾ ಪ್ಲಸ್ ರೂಪಾಂತರ ತಳಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸೋಂಕು ಕಾಣಿಸಿಕೊಂಡು ಭೂಪಾಲ್‌ನ ಪಾಟಿಧಾರ್ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸೇರಿದಂತೆ ಐವರಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿತ್ತು. ಈ ಪೈಕಿ ಯುವತಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದು, ಉಳಿದವರು ಚೇತರಿಸಿಕೊಂಡಿದ್ದಾರೆ.

ಮೃತ ಯುವತಿ ಉಜ್ಜೈನ್ ಮೂಲದ ನಿವಾಸಿಯಾಗಿದ್ದು, ಮೂವರು ಸೋಂಕಿತರು ಭೋಪಾಲ್ ಮತ್ತು ಇತರೆ ಇಬ್ಬರು ಉಜ್ಜೈನ್ ನಿವಾಸಿಗಳೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಈ ವರೆಗೂ 5 ಡೆಲ್ಟಾ ಪ್ಲಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಒಬ್ಬರು ಮೃತಪಟ್ಟಿದ್ದು, ನಾಲ್ವರಿಗೆ ಚಿಕಿತ್ಸೆ ಮುಂದುವರೆದಿದೆ. ರಾಜ್ಯ ಸರ್ಕಾರ ಡೆಲ್ಟಾ ರೂಪಾಂತರ ನಿಯಂತ್ರಣಕ್ಕೆ ಸಕಲ ಕ್ರಮಗಳನ್ನು ಕೈಗೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದರು. ಮೃತ ಯುವತಿಯ ಗಂಡ ಎರಡೂ ಪ್ರಮಾಣದ ಕೋವಿಡ್ ಲಸಿಕೆ ಪಡೆದಿದ್ದರು.

ಡೆಲ್ಟಾ ಪ್ಲಸ್ ಕಾಣಿಸಿಕೊಂಡಿರುವ ರಾಜ್ಯಗಳಿಗೆ ಕಂಟೈನ್ಮೆಂಟ್ ವಲಯಗಳನ್ನು ಸ್ಥಾಪಿಸಿ ಬಿಗಿಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.