Sunday, 15th December 2024

ಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನ ಹಾರಾಟ ಇಂದಿನಿಂದ 

#MadeIndia

ಇಟಾನಗರ: ಇಂದಿನಿಂದ ಭಾರತದ ಮೊಟ್ಟಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನವು ಹಾರಾಟ ಪ್ರಾರಂಭಿಸಲಿದೆ. ಅರುಣಾಚಲ ಪ್ರದೇಶದ ದೂರದ ಪಟ್ಟಣಗಳಿಗೆ ವಿಮಾನ ಸಂಪರ್ಕ ಒದಗಿಸಲಿದೆ.

ಭಾರತೀಯ ವಾಯುಯಾನದ ಇತಿಹಾಸದಲ್ಲಿ ಇದು ಮಹತ್ವದ ದಿನವಾಗಿದ್ದು, ಈ ವಿಮಾನ ಸಂಪರ್ಕ ಆರಂಭದಿಂದಾಗಿ ದೇಶದ ಉಳಿದ ಭಾಗ ಗಳೊಂದಿಗೆ ಈಶಾನ್ಯ ಪ್ರದೇಶದ ವಾಯು ಸಂಪರ್ಕವು ಇನ್ನಷ್ಟು ಅಧಿಕವಾಗಲಿದೆ. ಅರುಣಾಚಲ ಪ್ರದೇಶದ ಐದು ದೂರದ ಪಟ್ಟಣಗಳನ್ನು ಅಸ್ಸಾಂನ ದಿಬ್ರುಗಢಕ್ಕೆ ಸಂಪರ್ಕಿಸುವ ಮೊದಲ “ಮೇಡ್ ಇನ್ ಇಂಡಿಯಾ” 17-ಆಸನಗಳ ಡೋರ್ನಿಯರ್ ವಿಮಾನ ಇದಾಗಿದೆ.

ಈಶಾನ್ಯ ಪ್ರದೇಶದಲ್ಲಿ ವಾಯು ಸಂಪರ್ಕ ಮತ್ತು ವಾಯುಯಾನ ಮೂಲಸೌಕರ್ಯ ಒದಗಿಸುವ ಯೋಜನೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದನೆ ಮಾಡಿದೆ. ಈ ಯೋಜನೆಯ ಭಾಗವಾಗಿ, ಇಂದು ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ಹಾರಾಟ ನಡೆಸಲಿದೆ. ಯೋಜನೆಯ ಭಾಗವಾಗಿ ಇಂದು ಎರಡು ಪ್ರಮುಖ ಎರಡು ಬೆಳವಣಿಗೆಗಳು ನಡೆಯಲಿದೆ.

ಮೊದಲ ಮೇಡ್ ಇನ್ ಇಂಡಿಯಾ ವಿಮಾನ ಡೋರ್ನಿಯರ್ ಡೊ-228 ಅಸ್ಸಾಂನ ದಿಬ್ರುಗಢ್‌ನಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ಪಟ್ಟಣಕ್ಕೆ ಹಾರಾಟ ನಡೆಸಲಿದೆ. ಅಸ್ಸಾಂನ ಲಿಲಾಬರಿಯಲ್ಲಿ ಈಶಾನ್ಯ ಪ್ರದೇಶಕ್ಕಾಗಿ ಮೊದಲ ಎಫ್‌ಟಿಒ ಉದ್ಘಾಟನೆ ಇಂದೇ ಆಗಲಿದೆ.

ಎರಡೂ ಕಾರ್ಯಕ್ರಮಗಳಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಶರ್ಮಾ ಮತ್ತು ಪೇಮಾ ಖಂಡು ಸಹ ಭಾಗವಹಿಸಲಿದ್ದಾರೆ.