ಅಮೃತಸರ: ಮೀನುಗಾರಿಕೆಗೆ ತೆರಳಿದ್ದ ವೇಳೆ ಅಂತಾರಾಷ್ಟ್ರೀಯ ಗಡಿ ದಾಟಿದ ಹಿನ್ನೆಲೆ ಬಂಧನಕ್ಕೊಳಗಾಗಿದ್ದ 80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ್ ಬಿಡುಗಡೆ ಮಾಡಿದೆ.
ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಮೀನುಗಾರರನ್ನು ಬರಮಾಡಿಕೊಂಡರು.
ಮೀನುಗಾರರು, ಮೀನುಗಾರಿಕೆ ಮಾಡುವಾಗ ತಪ್ಪಾಗಿ ಪಾಕಿಸ್ತಾನದ ಗಡಿ ದಾಟಿದ್ದೇವೆ. ಅದೃಷ್ಟವಶಾತ್ ತಾಯ್ನಾಡಿಗೆ ವಾಪಾಸಾಗಿದ್ದೇವೆ. ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿರುವ ಇತರ ಭಾರತೀಯ ಮೀನುಗಾರರನ್ನೂ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಬಿಡುಗಡೆಗೊಂಡ ಮತ್ತೊಬ್ಬ ಮೀನುಗಾರ ಮಾತನಾಡಿ, ನಾವು ಮೀನುಗಾರಿಕೆಗೆಂದು ಹೋದಾಗ ಚಂಡಮಾರುತ ಉಂಟಾಗಿತ್ತು. ಇದರಿಂದಾಗಿ ದಾರಿ ತಪ್ಪಿ ಅಂತಾರಾಷ್ಟ್ರೀಯ ಗಡಿ ದಾಟಿದ್ದೇವೆ. ಈ ಹಿನ್ನೆಲೆ ನಮ್ಮನ್ನು ಮೂರು ವರ್ಷಗಳ ಕಾಲ ಪಾಕಿಸ್ತಾನ ಜೈಲಿನಲ್ಲಿರಿಸಲಾಗಿತ್ತು ಎಂದು ತಮ್ಮ ಅಳಲ ನ್ನು ತೋಡಿಕೊಂಡರು.
ಅಲ್ಲದೆ, ಇನ್ನೂ 184 ಮಂದಿ ಜೈಲಿನಲ್ಲಿದ್ದಾರೆ. ಅವರನ್ನೂ ವಾಪಸ್ ಕರೆತರುವಂತೆ ಸರ್ಕಾರವನ್ನು ಒತ್ತಾಯಿಸಲು ಬಯಸುತ್ತೇನೆ. ಅವರಲ್ಲಿ ಹಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ” ಎಂದು ಹೇಳಿದರು.