Friday, 22nd November 2024

ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆಯಲ್ಲಿ ಕೋವಿಡ್ ಸೋಂಕಿಗೆ ಉಚಿತ ಲಸಿಕೆ ಭರವಸೆ

19 ಲಕ್ಷ ಉದ್ಯೋಗ, ಕೋವಿಡ್ 19 ಸೋಂಕಿಗೆ ಉಚಿತ ಲಸಿಕೆ ನೀಡುವ ಭರವಸೆ 

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣಾ ಅಖಾಡ ರಂಗೇರತೊಡಗಿದ್ದು, ಆಡಳಿತಾರೂಢ ಬಿಜೆಪಿ ಗುರುವಾರ ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಿದ್ದು, 19 ಲಕ್ಷ ಉದ್ಯೋಗ ಹಾಗೂ ಕೋವಿಡ್ 19 ಸೋಂಕಿಗೆ ಉಚಿತ ಲಸಿಕೆ ನೀಡುವುದಾಗಿ ಭರವಸೆ ನೀಡಿದೆ.

ಮುಂದಿನ ಐದು ವರ್ಷಗಳವರೆಗೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜೆಡಿಯು ಮೈತ್ರಿಯ ಎನ್ ಡಿಎ ಪ್ರಣಾಳಿಕೆಯಲ್ಲಿ ತಿಳಿಸಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಗೊಳಿಸಿದರು.

ಪ್ರಣಾಳಿಕೆಯಲ್ಲಿ ಸಂಶೋಧನಾ ಹಂತದಲ್ಲಿರುವ ಕೋವಿಡ್ 19 ಸೋಂಕಿನ ಲಸಿಕೆಯನ್ನು ರಾಜ್ಯದ ಜನರಿಗೆ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದೆ. ಇದು ಚುನಾವಣೆಯಲ್ಲಿ ನಮ್ಮ ಮೊದಲ ಭರವಸೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.

ಪ್ರಣಾಳಿಕೆಯಲ್ಲಿ ಏನಿದೆ?

*19 ಲಕ್ಷ ಉದ್ಯೋಗಾವಕಾಶ

*ಬಿಹಾರದ ಎಲ್ಲಾ ಜನತೆಗೆ ಕೋವಿಡ್ ಲಸಿಕೆ ಉಚಿತ

*ಮೂರು ಲಕ್ಷ ನೂತನ ಶಿಕ್ಷಕರ ನೇಮಕಾತಿ

*ಬಿಹಾರವನ್ನು ಐಟಿ ಹಬ್ ಮಾಡುವ ಗುರಿ ಹೊಂದಿದ್ದು, 10 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ

*ಒಂದು ಕೋಟಿ ಮಹಿಳೆಯರನ್ನು ಸ್ವಾವಲಂಬಿಯಾಗಿಸಲಾಗುವುದು

*ಆರೋಗ್ಯ ಕ್ಷೇತ್ರದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ

*30 ಲಕ್ಷ ಜನರಿಗೆ ಮನೆ

ಚುನಾವಣೆಯಲ್ಲಿ 243 ಕ್ಷೇತ್ರಗಳಿಗೆ 3 ಹಂತಗಳಲ್ಲಿ ಮತದಾನ ನಡೆಯಲಿದೆ. ಆಕ್ಟೋಬರ್ 28ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ನವೆಂಬರ್ 3ರಂದು ಮತ್ತು ನವೆಂಬರ್ 7ರಂದು ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಘೋಷಣೆಯಾಗಲಿದೆ.