Friday, 27th December 2024

Free Services: ಪೆಟ್ರೋಲ್ ಪಂಪ್‌ನಲ್ಲಿ ಈ 6 ಉಚಿತ ಸೇವೆಗಳಿರುವುದು ನಿಮಗೆ ಗೊತ್ತಾ?

Free Services

ನವದೆಹಲಿ: ಹೆಜ್ಜೆಗೊಂದರಂತೆ ಪೆಟ್ರೋಲ್ ಪಂಪ್ (Petrol Pump) ಇದ್ದರೂ ಅಲ್ಲಿ ಸಿಗುವುದು ಕೇವಲ ಇಂಧನ, ಗಾಳಿ ಮಾತ್ರ ಎಂದುಕೊಂಡಿದ್ದೇವೆ. ಆದರೆ ಪೆಟ್ರೋಲ್ ಪಂಪ್‌ಗಳಲ್ಲಿ ಉಚಿತ (Free Services) ಪ್ರಥಮ ಚಿಕಿತ್ಸಾ ಕಿಟ್‌ಗಳಿಂದ (first aid kits) ಹಿಡಿದು ಇಂಧನದ ಗುಣಮಟ್ಟ ಪರಿಶೀಲನೆಯವರೆಗೆ ವಿವಿಧ ಉಚಿತ ಸೇವೆಗಳು ಲಭ್ಯವಿರುತ್ತವೆ.

ರಸ್ತೆಬದಿಯ ತುರ್ತು ಪರಿಸ್ಥಿತಿಯಲ್ಲಿ ನಾವು ಪೆಟ್ರೋಲ್ ಪಂಪ್ ಬಗ್ಗೆ ಯೋಚಿಸದೇ ಇರಬಹುದು. ಯಾಕೆಂದರೆ ಸಾಮಾನ್ಯವಾಗಿ ಕಿಲೋ ಮೀಟರ್‌ಗೆ ಒಂದರಂತೆ ಪೆಟ್ರೋಲ್ ಪಂಪ್‌ಗಳು ಇದ್ದೇ ಇರುತ್ತವೆ. ಹೀಗಾಗಿ ವಾಹನಗಳ ಇಂಧನ ಖಾಲಿಯಾಗಿದೆ ಎಂದು ಸೂಚಿಸಿದಾಗಲೇ ನಾವು ಪೆಟ್ರೋಲ್ ಪಂಪ್ ಬಳಿ ಹೋಗುತ್ತೇವೆ. ಯಾವುದೇ ಪೆಟ್ರೋಲ್ ಪಂಪ್‌ನಲ್ಲಿ ನಾವು ಆರು ಸೇವೆಗಳನ್ನು ಉಚಿತವಾಗಿ ಪಡೆಯಬಹುದು.

Free Services

ಗುಣಮಟ್ಟ ಮತ್ತು ಪ್ರಮಾಣ ಪರಿಶೀಲನೆ

ನಾವು ಪಡೆಯುತ್ತಿರುವ ಇಂಧನದ ಗುಣಮಟ್ಟದ ಬಗ್ಗೆ ಸಂಶಯ ಇದ್ದರೆ ಯಾವುದೇ ನಿಲ್ದಾಣದಲ್ಲಿ ಪೆಟ್ರೋಲ್ ಅಥವಾ ಡೀಸೆಲ್‌ಗಾಗಿ ಫಿಲ್ಟರ್ ಪೇಪರ್ ಪರೀಕ್ಷೆಯನ್ನು ಮಾಡಬಹುದು. ಅದನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಮಾಡಲಾಗುತ್ತದೆ. ಇಂಧನದ ಪ್ರಮಾಣದಲ್ಲಿ ಮೋಸ ಮಾಡಲಾಗುತ್ತಿದೆ ಎಂದೆನಿಸಿದರೂ ಪ್ರಮಾಣ ಪರಿಶೀಲನೆಯನ್ನು ಸಹ ಮಾಡಿಸಬಹುದು. ಇದಕ್ಕೆ ಪೆಟ್ರೋಲ್ ಪಂಪ್ ನ ಸಿಬ್ಬಂದಿ ನಿರಾಕರಿಸುವಂತಿಲ್ಲ ಅಥವಾ ಅದಕ್ಕೆ ಯಾವುದೇ ಶುಲ್ಕ ವಿಧಿಸುವಂತಿಲ್ಲ.

Free Services

ಪ್ರಥಮ ಚಿಕಿತ್ಸಾ ಕಿಟ್

ನಗರದ ಹೃದಯಭಾಗದಲ್ಲಿ ಅಥವಾ ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳು ಸಂಭವಿಸಿದರೆ ಯಾವುದೇ ಪ್ರಥಮ ಚಿಕಿತ್ಸಾ ಕಿಟ್ ಇಲ್ಲದೇ ಇದ್ದಾಗ ಹತ್ತಿರದ ಪೆಟ್ರೋಲ್ ಪಂಪ್‌ಗೆ ಧಾವಿಸಿ ಅಲ್ಲಿಂದ ಪ್ರಥಮ ಚಿಕಿತ್ಸಾ ಕಿಟ್ ಪಡೆಯಬಹುದು. ಪೆಟ್ರೋಲ್ ಪಂಪ್‌ಗಳು ಸಂಪೂರ್ಣ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಹೊಂದಿರುತ್ತವೆ.

ತುರ್ತು ಕರೆ

ತುರ್ತು ಫೋನ್ ಕರೆ ಮಾಡಲು ಹತ್ತಿರದ ಪೆಟ್ರೋಲ್ ಪಂಪ್‌ಗಳಿಗೆ ಭೇಟಿ ನೀಡಬಹುದು. ಅಪಘಾತಕ್ಕೊಳಗಾದವರ ಸಂಬಂಧಿಕರಿಗೆ ಅಥವಾ ಸಹಾಯಕ್ಕಾಗಿ ಸ್ನೇಹಿತರಿಗೆ ಕರೆ ಮಾಡಬೇಕಾಗಿದ್ದರೂ ಪೆಟ್ರೋಲ್ ಪಂಪ್‌ಗಳು ಉಚಿತ ಫೋನ್ ಕರೆ ಮಾಡುವ ಸೌಲಭ್ಯವನ್ನು ನೀಡುತ್ತವೆ. ಆದ್ದರಿಂದ ಮುಂದಿನ ಬಾರಿ ಫೋನ್ ಬ್ಯಾಟರಿಯಿಲ್ಲದೆ ರಸ್ತೆಯಲ್ಲಿ ಸಿಕ್ಕಿ ಹಾಕಿಕೊಂಡಾಗ ಅಥವಾ ತುರ್ತು ಸಹಾಯದ ಅಗತ್ಯವಿರುವಾಗ ಎಲ್ಲಿಗೆ ಹೋಗಬೇಕೆಂದು ಚಿಂತೆ ಮಾಡಬೇಕಿಲ್ಲ. ಹತ್ತಿರದ ಪೆಟ್ರೋಲ್ ಪಂಪ್‌ಗೆ ಧಾವಿಸಬಹದು.

Free Services

ಶೌಚಾಲಯ ವ್ಯವಸ್ಥೆ

ರೋಡ್ ಟ್ರಿಪ್‌ನಲ್ಲಿರಲಿ ಹೆಚ್ಚಾಗಿ ಎಲ್ಲರಿಗೂ ಕಾಡುವ ತೊಂದರೆ ಎಂದರೆ ಶೌಚಾಲಯಕ್ಕೆ ಎಲ್ಲಿಗೆ ಹೋಗುವುದು ಎಂದು. ಶೌಚಾಲಯಕ್ಕಾಗಿ ಅಲ್ಲಿ ಇಲ್ಲಿ ಹುಡುಕಬೇಕಿಲ್ಲ, ಹತ್ತಿರದ ಪೆಟ್ರೋಲ್ ಪಂಪ್ ಗೆ ತೆರಳಬಹುದು. ಪೆಟ್ರೋಲ್ ಪಂಪ್ ಗಳಲ್ಲಿ ಶೌಚಾಲಯಗಳಿಗೆ ಯಾವುದೇ ಪಾವತಿಯನ್ನು ಮಾಡದೇ ಬಳಸಬಹುದು. ಶೌಚಾಲಯವನ್ನು ಬಳಸಲು ಪೆಟ್ರೋಲ್ ಪಂಪ್ ಗೆ ಗ್ರಾಹಕರಾಗಿಯೇ ಹೋಗಬೇಕಿಲ್ಲ.

ಕುಡಿಯುವ ನೀರು

ಪೆಟ್ರೋಲ್ ಪಂಪ್ ಗಳಲ್ಲಿ ಸಿಗುವ ಉಚಿತ ಸೇವೆಗಳಲ್ಲಿ ಕುಡಿಯುವ ಶುದ್ಧ ನೀರು ಕೂಡ ಒಂದು. ಇಲ್ಲಿ ನೀರನ್ನು ಕುಡಿಯಬಹುದು ಅಥವಾ ಬಾಟಲಿಗಳಿಗೆ ತುಂಬಿಸಿಕೊಳ್ಳಬಹುದಾಗಿದೆ.

Free Services

ಉಚಿತ ಗಾಳಿ

ಪೆಟ್ರೋಲ್ ಬಂಕ್‌ಗಳಲ್ಲಿ ಟೈರ್‌ಗಳಿಗೆ ತುಂಬಲು ಗಾಳಿ ಉಚಿತವಾಗಿರುತ್ತದೆ. ಪೆಟ್ರೋಲ್ ಪಂಪ್‌ಗಳಲ್ಲಿ ಯಾವುದೇ ಶುಲ್ಕವನ್ನು ಪಾವತಿಸದೇ ಟೈರ್‌ಗಳಿಗೆ ಗಾಳಿ ತುಂಬಿಸಬಹುದಾಗಿದೆ. ವಾಹನಕ್ಕೆ ಇಂಧನವನ್ನು ತುಂಬದೇ ಇದ್ದರೂ ಉಚಿತ ಗಾಳಿಯನ್ನು ತುಂಬಿಸಬಹುದು. ಇಲ್ಲಿ ಶುಲ್ಕ ಪಾವತಿಸುವುದು ಬಿಡುವುದು ಗ್ರಾಹಕರ ಇಷ್ಟ. ಯಾಕೆಂದರೆ ಪೆಟ್ರೋಲ್ ಪಂಪ್ ಗಳಲ್ಲಿ ಗಾಳಿ ತುಂಬಿಸಲು ಶುಲ್ಕ ಕೇಳಿದರೆ ದೂರು ಸಲ್ಲಿಸಬಹುದಾಗಿದೆ.

ಈ ಸುದ್ದಿಯನ್ನೂ ಓದಿ; Job Guide: ಪದವೀಧರರಿಗೆ ಗುಡ್‌ನ್ಯೂಸ್‌; ಜನರಲ್‌ ಇನ್ಶೂರೆನ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾದಲ್ಲಿದೆ 110 ಹುದ್ದೆ; ಹೀಗೆ ಅಪ್ಲೈ ಮಾಡಿ