ಗಾಂಧಿನಗರ: ಗುಜರಾತ್ನಲ್ಲಿ ಮತ್ತೊಂದು ಸೇತುವೆ ಕುಸಿದು 10 ಜನ ಜಲಸಮಾಧಿಯಾಗಿದ್ದಾರೆ.
ಸುರೇಂದ್ರನಗರ ಜಿಲ್ಲೆಯ ವಸ್ತಾದಿ ಎಂಬ ಪ್ರದೇಶದಲ್ಲಿ ಸೇತುವೆ ಕುಸಿದಿದ್ದು, ಇದುವರೆಗೆ ನಾಲ್ವರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಗುಜರಾತ್ನ ಮೊರ್ಬಿಯಲ್ಲಿ ಸೇತುವೆ ಕುಸಿದು 130ಕ್ಕೂ ಅಧಿಕ ಜನ ಮೃತ ಪಟ್ಟ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.
ಭೊಗಾವೊ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕುಸಿದ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ಕೂಡ ಜನರ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ಇನ್ನೂ ಹಲವು ಜನ ನಾಪತ್ತೆ ಯಾಗಿರುವ ಶಂಕೆ ಇರುವ ಕಾರಣ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಮತ್ತೊಂದೆಡೆ, ಸೇತುವೆ ಕುಸಿತದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ ಗುಜರಾತ್ನ ಮೊರ್ಬಿಯಲ್ಲಿರುವ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆ ದುರಂತ ಸಂಭವಿ ಸಿತ್ತು. ಮೊರ್ಬಿ ಸೇತುವೆ ಕುಸಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ದುರಂತದಲ್ಲಿ 130ಕ್ಕೂ ಅಧಿಕ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು.