Thursday, 12th December 2024

ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ: ಜನಸಾಮಾನ್ಯರಿಗೆ ಬರೆ

ನವದೆಹಲಿ: ಇಂಧನ ಬೆಲೆ ಏರಿಕೆ ಬೆನ್ನಲ್ಲೇ ಗುರುವಾರ ಕೇಂದ್ರ ಸರ್ಕಾರ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿದೆ.

14.2 ಕೆ.ಜಿ. ಸಾಮರ್ಥ್ಯದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 25.50 ರೂಪಾಯಿ ಏರಿಕೆ ಮಾಡಿದ್ದು, ನವದೆಹಲಿಯಲ್ಲಿ ಅನಿಲ ಸಿಲಿಂಡರ್ ಬೆಲೆ 834.50 ರೂಪಾಯಿಗೆ ಏರಿಕೆಯಾಗಿದೆ. 19 ಕೆ.ಜಿ ತೂಕದ ಸಿಲಿಂಡರ್ ಬೆಲೆಯನ್ನು 76 ರೂಪಾಯಿಗೆ ಏರಿಕೆ ಮಾಡಿದ್ದು, ದೆಹಲಿಯಲ್ಲಿ ಬೆಲೆ 1,550ರೂಗೆ ತಲುಪಿದೆ.

ಪ್ರತಿ ತಿಂಗಳ ಮೊದಲ ದಿನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅನಿಲ ಸಿಲಿಂಡರ್‌ಗಳ ಬೆಲೆ ಪರಿಷ್ಕರಣೆ ಮಾಡುತ್ತವೆ. ಬೆಲೆ ಏರಿಕೆ ಮಾಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸುತ್ತವೆ. ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಿನಲ್ಲಿ ಅಡುಗೆ ಅನಿಲ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿ 10ರೂ ಬೆಲೆ ಇಳಿಕೆ ಮಾಡಲಾಗಿತ್ತು. ಮೇ ತಿಂಗಳಿನಲ್ಲಿ ಯಾವುದೇ ಪರಿಷ್ಕರಣೆ ಮಾಡಿರಲಿಲ್ಲ. ಇದೀಗ ಜುಲೈ ತಿಂಗಳಿನಲ್ಲಿ 25.50 ರೂ ಬೆಲೆ ಏರಿಕೆ ಮಾಡಲಾಗಿದೆ.

ನವದೆಹಲಿಯಲ್ಲಿ 809 ರೂ ಇಂದ 834.50 ರೂಪಾಯಿಗೆ ಏರಿಕೆಯಾಗಿದೆ. ಮುಂಬೈನಲ್ಲಿ ಕೂಡ 834.50 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಸಿಲಿಂಡರ್ ಬೆಲೆ 812 ರೂ ಇದ್ದದ್ದು ಈಗ 836.50 ರೂಗೆ ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ 835.50 ರೂ ಇದ್ದ ಸಿಲಿಂಡರ್ ಬೆಲೆ ಈಗ 861 ರೂಪಾಯಿಗೆ ಏರಿಕೆಯಾಗಿದೆ.