Friday, 22nd November 2024

Gas Leakage: ಕಾರ್ಖಾನೆಯಲ್ಲಿ ರಿಯಾಕ್ಟರ್‌ ಸ್ಫೋಟಗೊಂಡು ಅನಿಲ ಸೋರಿಕೆ; ಮೂವರ ದಾರುಣ ಸಾವು

gas leakage

ಮುಂಬೈ : ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ರಸಗೊಬ್ಬರ ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆ(Gas Leakage)ಯಾಗಿ ಮೂವರು ಸಾವನ್ನಪ್ಪಿದ್ದು, ಒಂಬತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಜಿಲ್ಲೆಯ ರಸಗೊಬ್ಬರ ಘಟಕದ ರಿಯಾಕ್ಟರ್‌ ಸ್ಫೋಟಗೊಂಡ ನಂತರ ಅನಿಲ ಸೋರಿಕೆಯಾದ ಪರಿಣಾಮವಾಗಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತರಾಗಿದ್ದಾರೆ. ಒಂಬತ್ತು ಮಂದಿ ಅಸ್ವಸ್ಥರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂಗ್ಲಿ ಜಿಲ್ಲೆಯ ಕಡೆಗಾಂವ್ ತಾಲೂಕು ಶಾಲ್ಗಾಂವ್ ಎಂಐಡಿಸಿಯಲ್ಲಿರುವ ಮ್ಯಾನ್ಮಾರ್ ಕೆಮಿಕಲ್ ಕಂಪನಿಯಲ್ಲಿ ಗುರುವಾರ ಸಂಜೆ 6.30 ರ ಆಸುಪಾಸಿನಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ರಸಗೊಬ್ಬರ ಘಟಕದ ರಿಯಾಕ್ಟರ್‌ ಸ್ಫೋಟಗೊಂಡು ಅನಿಲ ಸೋರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಿಲ ಸೋರಿಕೆಯಿಂದಾಗಿ ಘಟಕದಲ್ಲಿದ್ದ ಸುಮಾರು 12 ಜನರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಇಬ್ಬರು ಮಹಿಳಾ ಕಾರ್ಮಿಕರು ಮತ್ತು ಒಬ್ಬರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಒಂಬತ್ತು ಮಂದಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಕಡೆಗಾಂವ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಂಗ್ರಾಮ್ ಶೆವಾಲೆ ಅವರು ತಿಳಿಸಿದ್ದಾರೆ.

ಸೋರಿಕೆಯಾದ ಅನಿಲ ಅಮೋನಿಯಾ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಸಾಂಗ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಘುಗೆ ಹೇಳಿದ್ದಾರೆ. ಅಸ್ವಸ್ಥರ ಪೈಕಿ ಏಳು ಮಂದಿಯನ್ನು ಕರಾದ್‌ನ ಸಹ್ಯಾದ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರು ಐಸಿಯುನಲ್ಲಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಸಾವನ್ನಪ್ಪಿರುವ ಇಬ್ಬರು ಮಹಿಳೆಯರನ್ನು ಸಾಂಗ್ಲಿ ಜಿಲ್ಲೆಯ ಯೆತ್‌ಗಾಂವ್‌ನ ಸುಚಿತಾ ಉತಾಲೆ(50) ಮತ್ತು ಸತಾರಾ ಜಿಲ್ಲೆಯ ಮಸೂರ್‌ನ ನೀಲಂ ರೆತ್ರೆಕರ್(26) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬೀಳಲು ಒಂದು ದಿನ ಬಾಕಿಯಿರುವ ಮುನ್ನವೇ ಈ ಅನಾಹುತ ನಡೆದಿದೆ.

ಈ ಸುದ್ದಿಯನ್ನೂ ಓದಿ: LPG Price Hike: ತಿಂಗಳ ಆರಂಭದಲ್ಲೇ ಬೆಲೆ ಏರಿಕೆಯ ಶಾಕ್‌; ವಾಣಿಜ್ಯ ಬಳಕೆಯ 19 ಕೆಜಿ ಗ್ಯಾಸ್‌ ಸಿಲಿಂಡರ್ ದರ ಹೆಚ್ಚಳ

ಕೆಲವು ತಿಂಗಳ ಹಿಂದೆ ಹೊಸದುರ್ಗದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿರುವ ಪುರಸಭೆಯ ನೀರು ಶುದ್ಧೀಕರಣ ಘಟಕದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ನಡೆದಿತ್ತು. ಪಟ್ಟಣಕ್ಕೆ ಸರಬರಾಜು ಆಗುವ ನೀರು ಶುದ್ಧೀಕರಣಕ್ಕೆ ಬಳಸುವ ಕ್ಲೋರಿನ್ ಅನಿಲ ತುಂಬಿದ ಸಿಲಿಂಡರ್‌ನಿಂದ ಸಂಜೆ ಗ್ಯಾಸ್ ಸೋರಿಕೆಯಾಗಿದ್ದರಿಂದ ಸುಮಾರು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಜನರು ಉಸಿರುಗಟ್ಟಿ, ಅಸ್ವಸ್ಥಗೊಂಡಿದ್ದರು.

ಏಕಾಏಕಿ ಉಸಿರು ಕಟ್ಟಿದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗೆ ಬಂದು ಎಪಿಎಂಸಿ ಮೈದಾನ ಹಾಗೂ ಶಾಲಾ ಮೈದಾನದ ಸೇರಿದಂತೆ ಕಾಲಿ ಜಾಗಕ್ಕೆ ಓಡಿ ಹೋಗಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗುವುದನ್ನು ತಡೆಯಲು ತೀವ್ರ ಪ್ರಯತ್ನ ನಡೆಸಿದರು. ಸಿಬ್ಬಂದಿ ಕೂಡ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡರೂ ಗ್ಯಾಸ್‌ ಸೋರಿಕೆಯಾಗುವುದನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು.