ಶರೀರದ ಜಠರದ ಒಳಪದರದಲ್ಲಿ ಉಂಟಾಗುವ ಉರಿಯೂತವನ್ನೇ ಗ್ಯಾಸ್ಟ್ರಿಕ್ ಸಮಸ್ಯೆ (Gastric Problem) ಎಂದು ಕರೆಯಲಾಗುತ್ತದೆ. ತಿಂದ ಆಹಾರವನ್ನೆಲ್ಲ ಜಠರದಲ್ಲಿ ಜೀರ್ಣ ಮಾಡುವುದಕ್ಕೆ ಬೇಕಾದಂಥ ಪಾಚಕ ರಸವನ್ನು ಗ್ಯಾಸ್ಟ್ರಿಕ್ ಆಮ್ಲಗಳೆನ್ನುತ್ತಾರೆ. ಈ ಆಮ್ಲೀಯ ರಸದ ಉತ್ಪಾದನೆ ಅತಿಯಾಗಿ, ಅನ್ನನಾಳದಲ್ಲಿ ಮೇಲ್ಮುಖವಾಗಿ ಹರಿಯಲಾರಂಭಿಸಿದರೆ ಅದು ಹುಳಿ ತೇಗು. ಇದು ಅತಿಯಾದರೆ ಅನ್ನನಾಳದಲ್ಲಿ ಉಂಟಾಗುವ ಉರಿಯೂತವನ್ನು ಆಸಿಡಿಟಿ (Gastric Problems Causes) ಎನ್ನುತ್ತೇವೆ. ಈ ಲಕ್ಷಣಗಳು (Gastric Symptoms) ಲಘುವಾಗಿದ್ದರೆ ದೇಹಕ್ಕೆ ತೊಂದರೆಯಿಲ್ಲ. ಅದೇ ಉಲ್ಭಣವಾದರೆ ಆಗುವಂಥ ತೊಂದರೆಗಳು ಅಷ್ಟಿಷ್ಟೇನಲ್ಲ.
ಹೊಟ್ಟೆ ಉಬ್ಬರಿಸುವುದು, ಹೊಟ್ಟೆ ನೋವು, ಅಜೀರ್ಣ, ಹೊಟ್ಟೆ ತೊಳೆಸುವುದು, ವಾಂತಿ, ಹಸಿವಿಲ್ಲದಿರುವುದು… ಹೀಗೆ ಹಲವು ಬಗೆಯ ಸಮಸ್ಯೆ ಕಾಡುವುದು ಇದರಿಂದಲೇ. ಗ್ಯಾಸ್ಟ್ರಿಕ್ ನಿತ್ಯದ ಕೆಲಸಕ್ಕೂ ತೊಂದರೆಗಳನ್ನು ತಂದೊಡ್ಡಬಹುದು. ಏನಿದರ ಕಾರಣ ಮತ್ತು ಇದರ ಉಪಶಮನ ಹೇಗೆ?
ಗ್ಯಾಸ್ಟ್ರಿಕ್‌ಗೆ ಕಾರಣಗಳೇನು?
ನಾವು ಸೇವಿಸುವ ಆಹಾರವೇ ಇದಕ್ಕೆ ಮುಖ್ಯ ಕಾರಣ. ಅತಿಯಾಗಿ ಖಾರ, ಹುಳಿ ಮತ್ತು ಮಸಾಲೆಯ ಆಹಾರಗಳ ಸೇವನೆ, ಕಾಫಿ, ಚಹಾ ಮುಂತಾದ ಕೆಫೀನ್‌ಗಳ ಮಿತಿ ಮೀರಿದ ಸೇವನೆಯು ಜಠರದ ಒಳಪದರದಲ್ಲಿ ಉರಿಯೂತಕ್ಕೆ ಕಾರಣವಾಗಬಲ್ಲವು. ಇವಿಷ್ಟೇ ಅಲ್ಲ ಜಠರಕ್ಕೆ ಹಾನಿ ಮಾಡುವಂಥ ಎಲ್ಲ ರೀತಿಯ ಆಲ್ಕೋಹಾಲ್ ಸೇವನೆ ಮತ್ತು ಧೂಮಪಾನವೂ ಗ್ಯಾಸ್ಟ್ರಿಕ್ ಉಲ್ಭಣಿಸುವುದಕ್ಕೆ ಕಾರಣವಾಗುತ್ತವೆ.
ಸೋಂಕು
ಹೊಟ್ಟೆಗೆ ಆಗುವಂಥ ಬ್ಯಾಕ್ಟೀರಿಯ ಸೋಂಕು ಕೂಡ ಗ್ಯಾಸ್ಟ್ರಿಕ್ ಮಿತಿಮೀರುವಂತೆ ಮಾಡಬಲ್ಲದು. ಹೆಲಿಕೊಬ್ಯಾಕ್ಟರ್ ಪೈಲೊರಿ ಎನ್ನುವ ಬ್ಯಾಕ್ಟೀರಿಯ ಸೋಂಕಿನಿಂದಾಗಿ ಜಠರದ ಒಳಪದರಕ್ಕೆ ಹಾನಿಯಾಗಿ ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ತೊಂದರೆ ಹೆಚ್ಚಾಗುತ್ತದೆ.
ಔಷಧಗಳು
ಕೆಲವು ಸ್ಟಿರಾಯ್ಡ್ ರಹಿತವಾದ ಉರಿಯೂತ ಶಾಮಕ ಮದ್ದುಗಳನ್ನು (Nonsteroidal Anti-inflammatory Drugs (NSAIDs)) ದೀರ್ಘಕಾಲ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಆಸ್ಪಿರಿನ್, ಐಬುಪ್ರೊಫೆನ್, ನೆಪ್ರೊಕ್ಸೆನ್ ಮೊದಲಾದ ಮಾತ್ರೆಗಳೆಲ್ಲ ಇದೇ ಸಾಲಿಗೆ ಸೇರಿದಂಥವು. ಹಾಗಾಗಿ ಕಂಡಿದ್ದಕ್ಕೆಲ್ಲ ಇಂಥ ಔಷಧಗಳನ್ನು ಸೇವಿಸುವ ಮುನ್ನ ಎಚ್ಚರಿಕೆ ವಹಿಸಿ.
ಮಾನಸಿಕ ಒತ್ತಡ
ಹೊಟ್ಟೆಯ ತೊಂದರೆಗೂ ಮನಸ್ಸಿನ ಒತ್ತಡಕ್ಕೂ ಎತ್ತಣಿದೆಂತ್ತ ಸಂಬಂಧ ಎಂದು ಯೋಚಿಸದಿರಿ. ಹೊಟ್ಟೆಯಿಂದ ನಮ್ಮ ಮೆದುಳಿಗೆ ನೇರವಾದ ಸಂಪರ್ಕವಿದೆ. ಹಾಗಾಗಿ ಮನಸ್ಸಿನಲ್ಲಿ ಎಂಥದ್ದೇ ತೊಂದರೆಗಳಾದರೂ ಯಾವುದೇ ತೀವ್ರ ಭಾವಗಳು ಕಾಣಿಸಿಕೊಂಡರೂ ಹೊಟ್ಟೆಯಲ್ಲಿ ತಳಮಳ ತಪ್ಪಿದ್ದಲ್ಲ. ಬದುಕಿನಲ್ಲಿ ಒತ್ತಡ ಅತಿಯಾದರೆ, ಯಾವುದೋ ಅಪಘಾತದಿಂದ ಆಘಾತಗೊಂಡಿದ್ದರೆ ಶಸ್ತ್ರಚಿಕಿತ್ಸೆ ಅಥವಾ ಇನ್ನಾವುದೇ ಕಾರಣಕ್ಕೆ ದೈಹಿಕ ನೋವು ಅನುಭವಿಸುತ್ತಿದ್ದರೆ ಇದರಿಂದ ಉಂಟಾಗುವ ಮಾನಸಿಕ ಒತ್ತಡದಿಂದ ಗ್ಯಾಸ್ಟ್ರಿಕ್ ಕಾಣಿಸಿಕೊಳ್ಳುತ್ತದೆ.
ತಡೆಯುವುದು ಹೇಗೆ?
ಗ್ಯಾಸ್ಟ್ರಿಕ್ ಸಮಸ್ಯೆ ತೀವ್ರವಾಗಿ ಕಾಡುವ ಮುನ್ನ ಇದನ್ನು ತಡೆಯುವ ಕ್ರಮಗಳನ್ನು ಕೈಗೊಂಡರೆ ಒಳ್ಳೆಯದು. ಒಮ್ಮೆ ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ತೊಂದರೆಗಳು ತೀವ್ರವಾದರೆ ಪದೇಪದೆ ಕಾಡುತ್ತಲೇ ಇರುತ್ತವೆ. ಆಲ್ಕೋಹಾಲ್ ಮತ್ತು ಸಿಗರೇಟ್ ಸೇವಿಸುವ ಅಭ್ಯಾಸವಿದ್ದರೆ ಅದಕ್ಕೆ ಇತಿಶ್ರೀ ಹಾಡಿ. ಇವೆರಡೂ ಗ್ಯಾಸ್ಟ್ರಿಕ್ ಆಮ್ಲದ ಉತ್ಲಾದನೆ ಹೆಚ್ಚಿಸಿ, ಜಠರದ ಒಳಪದರವನ್ನು ಹಾಳು ಮಾಡುತ್ತವೆ. ಮತ್ತೆ ಔಷಧವನ್ನೇ ಆಹಾರವಾಗಿ ತಿನ್ನುವ ದಿನಗಳು ದೂರವಿಲ್ಲ.
ಆರೋಗ್ಯಕರ ಆಹಾರ
ಬಾಯಿಗೆ ರುಚಿ ಅಗತ್ಯ ಎನ್ನುವುದು ನಿಜವೇ. ಹಾಗೆಂದು ಆಹಾರದ ಷಡ್ರಸಗಳೂ ನವರಂಧ್ರಗಳನ್ನು ಮುಟ್ಟಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ನಿತ್ಯದ ಆಹಾರದಲ್ಲಿ ಉಪ್ಪು, ಹುಳಿ, ಖಾರ ಜೋರಾಗಿದ್ದರೆ ಕೊಂಚ ಕಡಿಮೆ ಮಾಡಿ. ಕರಿದಿದ್ದು, ಸಂಸ್ಕರಿಸಿದ ಆಹಾರಗಳಂತೂ ಬೇಡವೇ ಬೇಡ. ಅದರಲ್ಲೂ ಆಸಿಡಿಟಿ ಅಥವಾ ಗ್ಯಾಸ್ಟ್ರಿಕ್ ತೊಂದರೆ ಕಾಡುತ್ತಿರುವ ದಿನಗಳಲ್ಲಿ ಸೌಮ್ಯವಾದ ಆಹಾರ ಮಾತ್ರವೇ ಪಚನವಾಗಬಲ್ಲದು.
ಮಿತ ಪ್ರಮಾಣ
ಊಟ, ತಿಂಡಿಗಳ ಗಾತ್ರವನ್ನು ಸಣ್ಣದು ಮಾಡಿ, ಸಂಖ್ಯೆಯನ್ನು ಹೆಚ್ಚಿಸಿ. ಅಂದರೆ, ನಿಮ್ಮ ಆಹಾರದ ಪ್ರಮಾಣವನ್ನು ತಗ್ಗಿಸಿ ಮತ್ತು ಮೂರು ಊಟಗಳ ಬದಲಿಗೆ ಸಣ್ಣದಾದ ನಾಲ್ಕು ಊಟಗಳನ್ನು ಮಾಡಿ. ಇದರಿಂದ ಜಠರದ ಮೇಲಿನ ಒತ್ತಡ ತಗ್ಗಿಸಬಹುದು. ಚೆನ್ನಾಗಿ ನೀರು ಕುಡಿಯಿರಿ. ನೀರಿನಂಶ ದೇಹದಲ್ಲಿ ಕಡಿಮೆಯಾದರೆ ಗ್ಯಾಸ್ಟ್ರಿಕ್ ಸಮಸ್ಯೆ ಇನ್ನಷ್ಟು ಜೋರಾಗುತ್ತದೆ.
Cancer Cause: ಈ ಸೌಂದರ್ಯ ಸಲಹೆಗಳು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು ಎಚ್ಚರ!
ಒತ್ತಡ ಶಮನ
ಯೋಗ, ಧ್ಯಾನ, ಪ್ರಾಣಾಯಾಮ, ನಡಿಗೆ, ಸಂಗೀತ ಕೇಳುವುದು, ಇಷ್ಟಮಿತ್ರರೊಂದಿಗೆ ಸಮಯ ಕಳೆಯುವುದು ಮುಂತಾದ ಯಾವುದೇ ಒತ್ತಡ ಶಮನದ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ. ಇದರಿಂದಲೂ ಗ್ಯಾಸ್ಟ್ರಿಕ್ ಉಪಟಳ ತಗ್ಗುತ್ತದೆ.