Friday, 22nd November 2024

ನಾಲ್ಕು ವಾರ ಕಳೆದು ಎರಡನೇ ಡೋಸ್ ಪಡೆಯಬಯಸುವವರಿಗೆ ಲಸಿಕೆ ನೀಡಿ: ಕೇರಳ ಹೈಕೋರ್ಟ್

ಕೊಚ್ಚಿ: ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ ಅನ್ನು ನಾಲ್ಕು ವಾರಗಳ ಬಳಿಕ ಪಡೆಯಲು ಅನುಕೂಲವಾಗುವಂತೆ ‘ಕೋವಿನ್’ ಪೋರ್ಟಲ್‌ನಲ್ಲಿ ಬದಲಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.

ಸದ್ಯ ಮೊದಲ ಡೋಸ್‌ ಪಡೆದ 84 ದಿನಗಳ ಬಳಿಕ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ ಪಡೆಯಬಹು ದಾಗಿದೆ. ಆದರೆ, ನಾಲ್ಕು ವಾರಗಳು ಕಳೆದ ಕೂಡಲೇ ಎರಡನೇ ಡೋಸ್ ಪಡೆಯಲು ಬಯಸುವವರಿಗೆ ಲಸಿಕೆ ಒದಗಿಸಬೇಕು ಎಂದು ಹೈಕೋರ್ಟ್ ಹೇಳಿದೆ.

ವಿದೇಶಗಳಿಗೆ ತೆರಳುವವರಿಗೆ ಕೋವಿಡ್‌ನಿಂದ ರಕ್ಷಣೆ ಪಡೆಯುವ ಸಲುವಾಗಿ ಬೇಗನೆ ಲಸಿಕೆ ಪಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನುಮತಿ ನೀಡುವುದಾದರೆ ಅದೇ ಸೌಲಭ್ಯವನ್ನು ಉದ್ಯೋಗ ಅಥವಾ ಶಿಕ್ಷಣದ ಉದ್ದೇಶ ಹೊಂದಿದವರಿಗೆ ಯಾಕೆ ನೀಡಬಾರದು ಎಂದು ನ್ಯಾಯಮೂರ್ತಿ ಪಿ.ಬಿ.ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.

84 ದಿನಗಳ ವರೆಗೆ ಕಾಯುವ ಬದಲು ನಾಲ್ಕು ವಾರ ಕಳೆದ ಕೂಡಲೇ ಉದ್ಯೋಗಿಗಳಿಗೆ ಕೋವಿಶೀಲ್ಡ್ ಎರಡನೇ ಲಸಿಕೆಯ ಡೋಸ್ ನೀಡಲು ಅನುಮತಿ ನೀಡಬೇಕೆಂದು ‘ಕಿಟೆಕ್ಸ್ ಗಾರ್ಮೆಂಟ್ಸ್ ಲಿಮಿಟೆಡ್’ ಕಂಪನಿ ಅರ್ಜಿ ಸಲ್ಲಿಸಿತ್ತು.

5,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೋವಿಶೀಲ್ಡ್ ಮೊದಲ ಡೋಸ್‌ ನೀಡಲಾಗಿದೆ. ₹93 ಲಕ್ಷ ವೆಚ್ಚದಲ್ಲಿ ಎರಡನೇ ಡೋಸ್ ನೀಡಲು ಉದ್ದೇಶಿಸಿದ್ದು, ಸರ್ಕಾರದ ನಿರ್ಬಂಧಗಳಿಂದಾಗಿ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿತ್ತು. ತಜ್ಞರ ಶಿಫಾರಸಿನ ಮೇರೆಗೆ ಲಸಿಕೆಯ ಪರಿಣಾಮಕಾರಿತ್ವವನ್ನು ಗಮನದಲ್ಲಿಟ್ಟುಕೊಂಡು 84 ದಿನಗಳ ಅಂತರ ನಿಗದಿಪಡಿಸಲಾಗಿದೆ ಎಂದು ಕೇಂದ್ರವು ವಾದಿಸಿದೆ.