Saturday, 4th January 2025

ಫಲಿಸಿತು ದೇಶದ ಪ್ರಾರ್ಥನೆ: 10 ದಿನಗಳ ಹಿಂದೆ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಕಂದಮ್ಮನ ರಕ್ಷಣೆ

borewell

ಜೈಪುರ: ರಾಜಸ್ಥಾನದಲ್ಲಿ 10 ದಿನಗಳ ಹಿಂದೆ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಹೆಣ್ಣು ಮಗುವನ್ನು ರಕ್ಷಿಸಲಾಗಿದ್ದು, ಹೊಸ ವರ್ಷದ ಮೊದಲ ದಿನ ಗುಡ್‌ ನ್ಯೂಸ್‌ ಸಿಕ್ಕಿದೆ. ಆ ಮೂಲಕ ಇಡೀ ದೇಶದ ಪ್ರಾರ್ಥನೆ ಫಲಿಸಿದೆ. ರಾಜಸ್ಥಾನದ ಕೋಟ್‌ಪುಟ್ಲಿ (Rajasthan’s Kotputli)ಯಲ್ಲಿನ ಕೊಳವೆ ಬಾವಿಗೆ 10 ದಿನಗಳ ಹಿಂದೆ ಬಿದ್ದಿದ್ದ 3ರ ಹರೆಯದ ಚೇತನಾ ಎನ್ನುವ ಬಾಲಕಿಯನ್ನು ಇದೀಗ ಸುರಕ್ಷಿತವಾಗಿ ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆಗಾಗಿ ಚೇತನಾಳನ್ನು ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೋಟ್‌ಪುಟ್ಲಿಯ ಕಿರಾತ್ಪುರ ಗ್ರಾಮದ ಬಾಡಿಯಾಲಿ ಕಿ ಧಾನಿಯಲ್ಲಿ 700 ಅಡಿ ಆಳದ ಕೊಳವೆ ಬಾವಿಯಲ್ಲಿ ಕಳೆದ 10 ದಿನಗಳಿಂದ ಚೇತನಾ ಸಿಲುಕಿಕೊಂಡಿದ್ದಳು. ಆಕೆಯನ್ನು ರಕ್ಷಿಸಲು ಇಡೀ ಅಧಿಕಾರಿಗಳ ತಂಡ, ಸಿಬ್ಬಂದಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಅಲ್ಲದೆ ಆಕೆ ಸುರಕ್ಷಿತವಾಗಿ ಹೊರ ಬರುವಂತೆ ಇಡೀ ದೇಶವೇ ಪ್ರಾರ್ಥನೆಯಲ್ಲಿ ತೊಡಗಿತ್ತು.

ಆಟವಾಡುತ್ತಿದ್ದ ಚೇತನಾ ಡಿ. 23ರ ಅಪರಾಹ್ನ ತೆರೆದಿದ್ದ ಕೊಳಗೆ ಬಾವಿಯೊಳಗೆ ಬಿದ್ದು ಬಿಟ್ಟಿದ್ದಳು. ಆಕೆ ಅಲ್ಲೆಲ್ಲೂ ಕಂಡು ಬರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಡಿದಾಗ ಕೊಳವೆ ಬಾವಿಯೊಳಗೆ ಆಕೆ ಅಳುತ್ತಿರುವ ಧ್ವನಿ ಕೇಳಿಸಿತ್ತು. ಬಳಿಕ ಮನೆಯವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಕೂಡಲೆ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿತ್ತು. ವೈದ್ಯಕೀಯ ತಂಡವನ್ನು ಸರ್ವ ಸನ್ನದ್ಧ ಸ್ಥಿತಿಯಲ್ಲಿ ಸಜ್ಜುಗೊಳಿಸಲಾಗಿತ್ತು. ಆಕೆಯನ್ನು ಮೇಲಕ್ಕೆತ್ತುವ ಪ್ರಯತ್ನಗಳು ವಿಫಲವಾದಾಗ ಪೈಪ್‌ ಮೂಲಕ ಆಮ್ಲಜನಕವನ್ನು ಪೂರೈಸಲಾಯಿತು. ಬಳಿಕ ಸಿಬ್ಬಂದಿ ಕೊಳವೆ ಬಾವಿ ಸಮೀಪ ಮಣ್ಣು ತೋಡುವ ಮೂಲಕ ಆಕೆಯ ಸಮೀಪಕ್ಕೆ ತಲುಪಲು ಕಾರ್ಯಾಚರಣೆ ನಡೆಸಿತು. ಆದರೆ ಕಾಲುವೆ ತಪ್ಪಾದ ದಿಕ್ಕಿನಲ್ಲಿ ತೋಡಿರುವುದು ನಂತರ ಅರಿವಿಗೆ ಬಂದಿತ್ತು. ಹೀಗೆ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಇದೇ ಕಾರಣಕ್ಕೆ ಆಕೆಗೆ ನಿರಂತರವಾಗಿ ನೀರು, ಆಹಾರ ಒದಗಿಸಲಾಯಿತು. ಚೇತನಾ ರಕ್ಷಣೆಯ ಕೆಲವು ಗಂಟೆಗಳ ಮೊದಲು ಆಕೆಗೆ ಪೂರೈಸುತ್ತಿದ್ದ ಆಮ್ಲಜನಕ ಮತ್ತು ಆಹಾರದಲ್ಲಿ ವ್ಯತ್ಯಯ ಉಂಟಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜತೆಗೆ ಆಕೆಯ ಆರೋಗ್ಯ ಹದಗೆಟ್ಟಿತ್ತು. ಇದೀಗ ಸೂಕ್ತ ಸಮಯಕ್ಕೆ ಆಕೆಯನ್ನು ರಕ್ಷಿಸಲಾಗಿದ್ದು, ಇಡೀ ದೇಶವೇ ನಿಟ್ಟುಸಿರು ಬಿಟ್ಟಿದೆ.

ಪದೇ ಪದೆ ನಡೆಯುತ್ತಿದೆ ದುರಂತ

ಕೊಳವೆ ಬಾವಿಗೆ ಮಕ್ಕಳು ಬೀಳುತ್ತಿರುವ ಘಟನೆ ಪದೇ ಪದೆ ನಡೆಯುತ್ತಲೇ ಇದೆ. ತೆರೆದ ನಿಷ್ಕ್ರಿಯ ಕೊಳವೆ ಬಾಯಿಯನ್ನು ಮುಚ್ಚಲು ಸರ್ಕಾರದ ನಿರ್ದೇಶನಿದೆಯಾದರೂ ಅದಕ್ಕೆ ಸೂಕ್ತ ಕಾನೂನು ವ್ಯವಸ್ಥೆಯಿಲ್ಲ. ಹೀಗಾಗಿ ದುರಂತ ನಡೆಯುತ್ತಲೇ ಇದೆ. ಈ ವಿಚಾರದಲ್ಲಿ ಕಠಿಣ ಕಾನೂನು ಜಾರಿಗೊಳಿಸುವ ಅಗತ್ಯವಿದೆ ಎಂಬ ಕೂಗು ಕೇಳಿ ಬಂದಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದ ದೌಸಾದ ಬಂಡಿಕುಯಿ ಪ್ರದೇಶದ‍ಲ್ಲಿ 35 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಹೆಣ್ಣು ಮಗುವನ್ನು ನಿರಂತರ 18 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Rajasthan Borewell tragedy : ಫಲಿಸಲಿಲ್ಲ ಪ್ರಾರ್ಥನೆ- ಬದುಕುಳಿಯಲಿಲ್ಲ ಕೊಳವೆ ಬಾವಿಗೆ ಬಿದ್ದಿದ್ದ ಪುಟ್ಟ ಕಂದಮ್ಮ