– ಕೇಶವ ಪ್ರಸಾದ್ ಬಿ.
ಮುಂಬೈ: 2024ರಲ್ಲಿ ಬಂಗಾರದಲ್ಲಿ ಹೂಡಿಕೆ ಮಾಡಿದವರಿಗೆ ಭರ್ಜರಿ 26% ಲಾಭವಾಗಿದೆ. ಈ ಮೂಲಕ ನಿಫ್ಟಿ ಮತ್ತು ಸೆನ್ಸೆಕ್ಸ್ ಅನ್ನೂ ಚಿನ್ನವೇ ಹಿಂದಿಕ್ಕಿದೆ. ಷೇರು, ಮ್ಯೂಚುವಲ್ ಫಂಡ್‌ಗಳನ್ನೂ ಮೀರಿ, ಚಿನ್ನದಲ್ಲಿ ಹೂಡಿಕೆದಾರರಿಗೆ ಲಾಭ ಸಿಕ್ಕಿದೆ (Gold Investment). ನಿಫ್ಟಿ 9% ಮತ್ತು ಸೆನ್ಸೆಕ್ಸ್ 8% ರಿಟರ್ನ್ ಅನ್ನು ಕೊಟ್ಟಿದ್ದರೆ, ಇವೆರಡನ್ನೂ ಹಿಂದಿಕ್ಕಿ, ಚಿನ್ನ 26% ಲಾಭ ನೀಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಚಿನ್ನ ಆಪದ್ಧನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಾಗಾದ್ರೆ ಈ ಹೊಸ ವರ್ಷ 2025ರಲ್ಲಿ ಚಿನ್ನದ ದರ ಏನಾಗಬಹುದು? ಬನ್ನಿ ನೋಡೋಣ.
ಈಗ ಕಳೆದ ವರ್ಷ ಏನಾಯಿತು ಅಂತ ತಿಳಿಯೋಣ. 2024ರಲ್ಲಿ ಚಿನ್ನದ ದರವು ಪ್ರತಿ 10 ಗ್ರಾಮ್‌ಗೆ 80,000 ರೂ.ಗಳ ಗಡಿಯನ್ನು ದಾಟಿತ್ತು. ಎಂಸಿಎಕ್ಸ್‌ನಲ್ಲಿ ಗರಿಷ್ಠ ದರವಾಗಿ 80,282 ರೂ.ಗೆ ಏರಿಕೆಯಾಗಿತ್ತು. ಫೆಡರಲ್ ರಿಸರ್ವ್ ಪಾಲಿಸಿಗಳ ರೆಸಿಸ್ಟೆನ್ಸ್ ಬರುವುದಕ್ಕಿಂತ ಮೊದಲೇ ಬಂಗಾರ ಏರುಗತಿಯಲ್ಲಿತ್ತು. ಈಗ 78,600 ರೂ.ಗಳ ಮಟ್ಟದಲ್ಲಿದೆ. ಬೆಳ್ಳಿಯ ದರದಲ್ಲಿ ಕೂಡ 2024ರಲ್ಲಿ 42% ಏರಿಕೆಯಾಗಿತ್ತು. ಪ್ರತಿ ಕೆಜಿಗೆ 70,000 ರೂ.ಗಳಿಂದ ಆರಂಭವಾಗಿದ್ದ ದರ 1 ಲಕ್ಷ ರೂ.ಗೆ ಹೆಚ್ಚಳವಾಗಿತ್ತು. ಇಂಡಸ್ಟ್ರಿಗಳಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಳವಾಗಿರುವುದು ಇದಕ್ಕೆ ಕಾರಣ.
ಕಳೆದ 10 ವರ್ಷಗಳ ಪರ್ಫಾಮೆನ್ಸ್ ನೋಡಿದ್ರೆ, ಬಂಗಾರವು ಸರಾಸರಿ 8% ರಿಟರ್ನ್ ಕೊಟ್ಟಿದೆ. 2023ರಲ್ಲಿ 13.1% ರಿಟರ್ನ್ಸ್ ಕೊಟ್ಟಿತ್ತು. ಅಮೆರಿಕದಲ್ಲಿ ಟ್ರಂಪ್ ಆಡಳಿತ, ಭಾರತದ ಬಜೆಟ್ ಮತ್ತು ಆರ್‌ಬಿಐನ ಹೊಸ ಗವರ್ನರ್ ನೇತೃತ್ವದ ಮಂಡಳಿಯ ನೀತಿ ನಿಲುವುಗಳು 2025ರಲ್ಲಿ ಬಂಗಾರದ ದರದ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಟ್ರಂಪ್ ಆಡಳಿತದಲ್ಲಿ ಡಾಲರ್ ಪ್ರಬಲವಾದರೆ, ಚಿನ್ನದ ದರ ಹೆಚ್ಚಳದ ವೇಗ ಕಡಿಮೆಯಾಗಬಹುದು.
2025ರಲ್ಲಿ ಚಿನ್ನ-ಬೆಳ್ಳಿ ದರ ಎಷ್ಟು ಏರಿಕೆಯಾಗಬಹುದು?
ತಜ್ಞರ ಪ್ರಕಾರ 2025ರಲ್ಲಿ ಕೂಡ ಬಂಗಾರದಲ್ಲಿ 12-20% ರಿಟರ್ನ್ ಸಿಗುವ ನಿರೀಕ್ಷೆ ಇದೆ.
ಅಂದರೆ ಹತ್ತು ಗ್ರಾಮ್ ದರ 82,000 ರೂ.ಗಳಿಂದ 85,000 ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ.
ಅದೇ ರೀತಿ ಬೆಳ್ಳಿಯ ದರ ಪ್ರತಿ ಕೆಜಿಗೆ 1 ಲಕ್ಷದ 10 ಸಾವಿರ ರೂ.ಗಳಿಂದ 25 ಸಾವಿರ ರೂ.ಗೆ ಏರಿಕೆಯಾಗಬಹುದು.
ವಿಶೇಷ ಏನೆಂದರೆ, ಈ ಸಂಗತಿ ಭಾರತೀಯರಿಗೆ ಪ್ರಾಚೀನ ಕಾಲದಿಂದಲೂ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ನಮ್ಮ ಹಿರಿಯರು ಹಿಂದಿನಿಂದಲೂ ಬಂಗಾರದ ಖರೀದಿಗೆ ಹಿಂದು ಮುಂದು ನೋಡುತ್ತಿರಲಿಲ್ಲ. ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ಇತ್ತೀಚಿನ ವರದಿಯ ಪ್ರಕಾರ ಭಾರತೀಯ ಮಹಿಳೆಯರ ಬಳಿ ಒಟ್ಟು 24,000 ಟನ್ ಬಂಗಾರ ಇದೆ. ಇದು ಜ್ಯುವೆಲ್ಲರಿ ರೂಪದಲ್ಲಿರುವ ವಿಶ್ವದ ಒಟ್ಟು ಚಿನ್ನದ ಸಂಗ್ರಹದ 11% ಆಗುತ್ತದೆ. ಇದು ವೈಯಕ್ತಿಕವಾಗಿ ಟಾಪ್ 5 ರಾಷ್ಟ್ರಗಳಲ್ಲಿನ ಜನರು ಹೊಂದಿರುವ ಬಂಗಾರದ ಒಟ್ಟು ಮೊತ್ತಕ್ಕಿಂತಲೂ ಹೆಚ್ಚು ಅಂದರೆ ಆಶ್ಚರ್ಯವಾದೀತು.
ಅಮೆರಿಕದಲ್ಲಿ ಜನರು ಒಟ್ಟು 8,000 ಟನ್ ಚಿನ್ನವನ್ನು ಹೊಂದಿದ್ದಾರೆ. ಜರ್ಮನಿಯಲ್ಲಿ 3,300 ಟನ್, ಇಟಲಿಯಲ್ಲಿ 2,450 ಟನ್, ಫ್ರಾನ್ಸ್‌ನಲ್ಲಿ 2,400 ಟನ್ ಮತ್ತು ರಷ್ಯಾದಲ್ಲಿ 1,900 ಟನ್ ಬಂಗಾರವನ್ನು ಜನರು ವೈಯಕ್ತಿಕವಾಗಿ ಇಟ್ಟುಕೊಂಡಿದ್ದಾರೆ.
ಭಾರತದಲ್ಲಿ ಚಿನ್ನಕ್ಕೆ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಮಹತ್ವದ ಸ್ಥಾನಮಾನವಿದೆ. ಮದುವೆ ಮೊದಲಾದ ಶುಭ ಸಮಾರಂಭದಲ್ಲಿ ಸ್ವಲ್ಪವಾದರೂ ಚಿನ್ನ ಬೇಕೇಬೇಕು. ಅಕ್ಷಯ ತೃತೀಯ, ದೀಪಾವಳಿ, ಯುಗಾದಿ ಮೊದಲಾದ ಹಬ್ಬಗಳ ಸಂದರ್ಭವೂ ಬಂಗಾರವನ್ನು ಖರೀದಿಸುತ್ತಾರೆ.
ಭಾರತದಲ್ಲಿರುವ ಒಟ್ಟು ಚಿನ್ನದಲ್ಲಿ 40% ನಷ್ಟು ದಕ್ಷಿಣ ಭಾರತದಲ್ಲಿ ಇದೆ. ತಮಿಳುನಾಡು ಒಂದರಲ್ಲಿಯೇ 28% ಇದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ, 2020-21ರಲ್ಲಿ ಭಾರತೀಯ ಕುಟುಂಬಗಳಲ್ಲಿ 21,000-23,000 ಟನ್ ಬಂಗಾರವಿತ್ತು. 2023ರ ವೇಳೆಗೆ 24,000-25,000 ಟನ್‌ಗೆ ಏರಿತ್ತು. ಭಾರತದ ಜಿಡಿಪಿಯಲ್ಲಿ 40% ಪಾಲನ್ನು ಬಂಗಾರ ಹೊಂದಿದೆ. ಹೀಗೆ ಆರ್ಥಿಕವಾಗಿಯೂ ಬಂಗಾರದ ಪಾಲು ಇದೆ. ಭಾರತೀಯ ಕಾನೂನು ಪ್ರಕಾರ ವಿವಾಹಿತ ಮಹಿಳೆ ಹೊಂದಿರುವ 500 ಗ್ರಾಮ್ ಚಿನ್ನಕ್ಕೆ ತೆರಿಗೆ ಇರುವುದಿಲ್ಲ. ಅವಿವಾಹಿತ ಮಹಿಳೆ ಹೊಂದಿರುವ 250 ಗ್ರಾಮ್ ಮತ್ತು ಪುರುಷರಲ್ಲಿರುವ 100 ಗ್ರಾಮ್ ಚಿನ್ನವು ಟ್ಯಾಕ್ಸ್ ವ್ಯಾಪ್ತಿಗೆ ಬರುವುದಿಲ್ಲ.
ಇಂಡಸ್ಟ್ರಿಯಲ್ಲೂ ಚಿನ್ನ-ಬೆಳ್ಳಿ ಬೇಕಾಗುತ್ತದೆ. ಕಂಪ್ಯೂಟರ್, ಮೊಬೈಲ್ ಫೋನ್, ಟಿವಿ, ಬ್ಯಾಟರಿ, ಕ್ಯಾಮೆರಾ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಬೆಳ್ಳಿಯು ಬಳಕೆಯಾಗುತ್ತದೆ. ಅವುಗಳ ಸರ್ಕ್ಯೂಟ್ ಬೋರ್ಡ್‌ಗಳಲ್ಲಿ ಬೆಳ್ಳಿ ಬಳಕೆಯಾಗುತ್ತದೆ. ಆಟೊಮೊಬೈಲ್, ಸೋಲಾರ್ ಎನರ್ಜಿ, ವಾಟರ್ ಪ್ಯೂರಿಫಿಕೇಶನ್ ಉದ್ದಿಮೆಗಳಲ್ಲಿ ಬೆಳ್ಳಿ ಬೇಕಾಗುತ್ತದೆ. ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ಮೆಡಿಸಿನ್, ದಂತ ವೈದ್ಯಕೀಯ ವಲಯದಲ್ಲಿ ಚಿನ್ನವೂ ಬಳಕೆಯಾಗುತ್ತದೆ.
ಕಳೆದ 10 ವರ್ಷಗಳ ಪರ್ಫಾಮೆನ್ಸ್ ನೋಡಿದ್ರೆ, ಬಂಗಾರವು ಸರಾಸರಿ 8% ರಿಟರ್ನ್ ಕೊಟ್ಟಿದೆ. 2023ರಲ್ಲಿ 13.1% ರಿಟರ್ನ್ಸ್ ಕೊಟ್ಟಿತ್ತು. ಅಮೆರಿಕದಲ್ಲಿ ಟ್ರಂಪ್ ಆಡಳಿತ, ಭಾರತದ ಬಜೆಟ್ ಮತ್ತು ಆರ್‌ಬಿಐನ ಹೊಸ ಗವರ್ನರ್ ನೇತೃತ್ವದ ಮಂಡಳಿಯ ನೀತಿ ನಿಲುವುಗಳು 2025ರಲ್ಲಿ ಬಂಗಾರದ ದರದ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಟ್ರಂಪ್ ಆಡಳಿತದಲ್ಲಿ ಡಾಲರ್ ಪ್ರಬಲವಾದರೆ, ಚಿನ್ನದ ದರ ಹೆಚ್ಚಳದ ವೇಗ ಕಡಿಮೆಯಾಗಬಹುದು.
ಹಾಗಾದರೆ ಚಿನ್ನದಲ್ಲಿ ಹೂಡಿಕೆ ಮಾಡೋದು ಹೇಗೆ ಎಂಬುದನ್ನು ನೋಡೋಣ. ಜ್ಯುವೆಲ್ಲರಿಗಳು, ಚಿನ್ನದ ಕಾಯಿನ್, ಬಾರ್ಸ್, ಗೋಲ್ಡ್ ಇಟಿಎಫ್ ಮತ್ತು ಸಾವರಿನ್ ಗೋಲ್ಡ್ ಬಾಂಡ್‌ಗಳ ಮೂಲಕ ಚಿನ್ನದಲ್ಲಿ ಹೂಡಿಕೆಯನ್ನು ಮಾಡಬಹುದು.
ಗೋಲ್ಡ್ ಇಟಿಎಫ್‌ಗಳು ಎಕ್ಸ್‌ಚೇಂಜ್ಡ್ ಟ್ರೇಡೆಡ್ ಫಂಡ್‌ಗಳಾಗಿದ್ದು, ಫಿಸಿಕಲ್ ಗೋಲ್ಡ್ ಖರೀದಿಸಿದ್ದಕ್ಕೆ ಸಮಾನವಾಗಿರುತ್ತದೆ. ಆದರೆ ವಾಸ್ತವವಾಗಿ ಫಿಸಿಕಲ್ ಗೋಲ್ಡ್ ಅನ್ನು ನೀವು ಖರೀದಿಸುವುದಿಲ್ಲ. ಡಿಮ್ಯಾಟ್ ಫಾರ್ಮ್ಯಾಟ್‌ನಲ್ಲಿ ನಿಮ್ಮ ಹೂಡಿಕೆಯ ಚಿನ್ನ ಸುರಕ್ಷಿತವಾಗಿರುತ್ತದೆ. ನಿಪ್ಪೋನ್ ಗೋಲ್ಡ್ ಇಟಿಎಫ್, ಎಚ್‌ಡಿಎಫ್‌ಸಿ ಗೋಲ್ಡ್ ಇಟಿಎಫ್, ಐಸಿಐಸಿಐ ಪ್ರುಡೆನ್ಷಿಯಲ್ ಗೋಲ್ಡ್ ಇಟಿಎಫ್, ಕೋಟಕ್ ಗೋಲ್ಡ್ ಇಟಿಎಫ್, ಎಸ್‌ಬಿಐ ಗೋಲ್ಡ್ ಇಟಿಎಫ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡಬಹುದು.
ಸಾವರಿನ್ ಗೋಲ್ಡ್‌ಬಾಂಡ್‌ಗಳು ಆರ್‌ಬಿಐ ಬಿಡುಗಡೆ ಮಾಡುವ ಡಿಜಿಟಲ್ ಗೋಲ್ಡ್ ಯೋಜನೆಯಾಗಿದೆ. ಇದರದಲ್ಲಿ ಬಂಗಾರದ ದರ ಏರಿಕೆಯ ಲಾಭದ ಜತೆಗೆ ಹೆಚ್ಚುವರಿಯಾಗಿ ವಾರ್ಷಿಕ 2.5% ಬಡ್ಡಿಯೂ ಸಿಗುತ್ತದೆ. ಗರಿಷ್ಠ 4 ಕೆಜಿ ತನಕ ಹೂಡಿಕೆ ಮಾಡಬಹುದು. ಆದರೆ 2024-25ರ ಸಾಲಿನಲ್ಲಿ ಸಾವರಿನ ಗೋಲ್ಡ್ ಬಾಂಡ್ ಪ್ರೋಗ್ರಾಮ್‌ನ ಹೊಸ ಬಿಡುಗಡೆ ಇರುವ ಸಾಧ್ಯತೆ ಸದ್ಯಕ್ಕಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಈ ಬಾಂಡ್‌ಗಳನ್ನು ಬಿಎಸ್‌ಇ ಮ್ತು ಎನ್‌ಎಸ್‌ಇನಲ್ಲಿ ಸೆಕೆಂಡರಿ ಮಾರುಕಟ್ಟೆಯಲ್ಲಿ ಖರೀದಿಸುವ ಆಯ್ಕೆ ಮಾತ್ರ ಉಳಿದಿದೆ.
ಹಾಗಾದರೆ ಚಿನ್ನದ ದರ ಇಳಿಕೆಯಾಗಬಹುದೇ? ಅಂಥ ಸಾಧ್ಯತೆ ಕಡಿಮೆ. ಹೀಗಿದ್ದರೂ, ಜಾಗತಿಕ ಮಟ್ಟದಲ್ಲಿ ರಾಜಕೀಯ ಸಂಘರ್ಷಗಳು ಕಡಿಮೆಯಾದರೆ, ಡಾಲರ್ ಪ್ರಾಬಲ್ಯ ಹೆಚ್ಚಳವಾದರೆ ಬಂಗಾರದ ದರದಲ್ಲಿ ಅಲ್ಪ ಇಳಿಕೆಯನ್ನೂ ಕಾಣಬಹುದು. ಆದರೆ ದೀರ್ಘಕಾಲೀನ ಹೂಡಿಕೆಗೆ ಚಿನ್ನ ಲಾಭದಾಯಕವಾಗಿದೆ ಎಂಬುದನ್ನು ಅಂಕಿ ಅಂಶಗಳು ತಿಳಿಸುತ್ತಿವೆ.
ಈ ಸುದ್ದಿಯನ್ನೂ ಓದಿ: Money tips: 2025ರಲ್ಲಿ ಶ್ರೀಮಂತರಾಗುವುದು ಹೇಗೆ? ಇಲ್ಲಿದೆ ಟಿಪ್ಸ್