ಹೈದರಾಬಾದ್: ಹೊಸ ವರ್ಷದಂದು ತಿರುಪತಿ (Tirupati) ತಿಮ್ಮಪ್ಪನ ದರ್ಶನಕ್ಕೆ ಬಂದವರಿಗೆ ಅಚ್ಚರಿಯ ದೃಶ್ಯವೊಂದು ಕಾಣ ಸಿಕ್ಕಿದೆ. ಕೆಲವರು ತಮ್ಮನ್ನು ತಾವೇ ನಂಬದೆ ಕಣ್ಣುಜ್ಜಿಕೊಂಡು ಇದು ಕನಸೇ ನನಸೇ ಎಂದು ಅಚ್ಚರಿಯಿಂದ ನೋಡಿದ್ದಾರೆ. ಯಾಕೆಂದರೆ ಅಂತಹದ್ದೊಂದು ಅಪರೂಪದ ಘಟನೆ ಅಲ್ಲಿ ನಡೆದಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 5 ಕೆಜಿ ತೂಕದ ಚಿನ್ನಾಭರಣ ಧರಿಸಿದ ವ್ಯಕ್ತಿಯೊಬ್ಬ ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದ. ಹಲವರಂತೂ ತೆರೆದ ಬಾಯಿಯನ್ನು ಮುಚ್ಚುವುದನ್ನೂ ಮರೆತು ಬೆರಗಾಗಿ ನಿಂತಿದ್ದರು. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral Video).
ಚಿನ್ನ ಯಾರನ್ನು ತಾನೇ ಆಕರ್ಷಿಸುವುದಿಲ್ಲ? ಅದರಲ್ಲಿಯೂ ಮಹಿಳೆಯರಿಗೆ ಈ ಬಗ್ಗೆ ಸೆಳೆತ ಹೆಚ್ಚು. ಹಾಗಂತ ಅವರು ಮಾತ್ರ ಚಿನ್ನಾಭರಣ ಧರಿಸುತ್ತಾರೆ ಎಂದಲ್ಲ. ಇತ್ತೀಚೆಗೆ ಚಿನ್ನದ ವ್ಯಾಮೋಹ ಪುರುಷರನ್ನೂ ಬಿಟ್ಟಿಲ್ಲ. ಅನೇಕ ಪುರುಷರು ಮೈತುಂಬಾ ಒಡವೆ ಧರಿಸಿ ಆಗಾಗ ಮಾಧ್ಯಮದ ಕಣ್ಣಿಗೆ ಬೀಳುತ್ತಿರುತ್ತಾರೆ. ಆದರೆ ಈತ ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಪ್ಪ ದಪ್ಪದ ಸರ ಸೇರಿದಂತೆ ಬರೋಬ್ಬರಿ 5 ಕೆಜಿ ಚಿನ್ನದ ಒಡವೆ ಧರಿಸಿ ಕುತೂಹಲ ಕೇಂದ್ರಬಿಂದುವಾಗಿದ್ದಾನೆ. ಜ್ಯುವೆಲ್ಲರಿ ಶಾಪ್ ನಡೆದಾಡುತ್ತಿದೆಯೇ ಎನ್ನುವಂತೆ ಭಕ್ತರು ಆತನನ್ನೇ ದಿಟ್ಟಿಸಿದ್ದಾರೆ.
With over 5 Kg gold ornaments around his neck, Vijay Kumar, popularly known as Gold Man visited Lord Sri Venkateswara temple at Tirumala, in Tirupati on #NewYear .#GoldMan #Gold #Tirumala #Tirupati#AndhraPradesh #NewYear2025 pic.twitter.com/2hf1nxNAcb
— Surya Reddy (@jsuryareddy) January 1, 2025
ಯಾರೀತ?
ಈ ರೀತಿ ಕೆಜಿಗಟ್ಟಲೆ ಚಿನ್ನಾಭರಣ ಧರಿಸಿ ಬಂದವನನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಹೈದರಾಬಾದ್ ಮೂಲದ ಈತನಿಗೆ ಚಿನ್ನ ಎಂದರೆ ಹಿಂದಿನಿಂದಲ ಬಹಳ ಪ್ರೀತಿ. ಆಗಾಗ ಅಪಾರ ಪ್ರಮಾಣದ ಚಿನ್ನ ಧರಿಸಿ ಸದ್ದು ಮಾಡುತ್ತಿರುತ್ತಾನೆ. ಇದೇ ಕಾರಣಕ್ಕೆ ಈತನನ್ನು ʼಗೋಲ್ಡ್ ಮ್ಯಾನ್ʼ ಎಂದು ಕರೆಯಲಾಗುತ್ತದೆ. ಬುಧವಾರ ತಿಮ್ಮಪ್ಪನ ದರ್ಶನಕ್ಕೆ ಬಂದವನ ಮೈತುಂಬಾ ಅಲಂಕರಿಸಿದ್ದ ಉಂಗುರ, ಸರ, ಬ್ರೇಸ್‌ಲೆಟ್ ಮತ್ತು ಇತರ ಆಭರಣಗಳು ಕಣ್ಣು ಕುಕ್ಕುವಂತಿದ್ದವು. ಎರಡೂ ಕೈಗಳ 10 ಬೆರಳುಗಳಲ್ಲಿ ಉಂಗುರ, ಎರಡೂ ಕೈಗಳಲ್ಲಿ ದಪ್ಪದ ಬ್ರೇಸ್‌ಲೆಟ್, ಚಿನ್ನದ ವಾಚ್ ಮತ್ತು ಕೊರಳ ಸುತ್ತಲೂ ದಪ್ಪದಾದ ಸರಗಳು ರಾರಾಜಿಸುತ್ತಿದ್ದವು.
ಸೆಲ್ಫಿಗೆ ಮುಗಿಬಿದ್ದ ಭಕ್ತರು
ಗೋಲ್ಡ್ ಮ್ಯಾನ್‌ನನ್ನು ಕಂಡು ಒಂದುಕ್ಷಣ ಬೆರಗಾಗಿ ಮಾತು ಮರೆತ ಭಕ್ತರು ಬಳಿಕ ಆತನ ಬಳಿಗೆ ತೆರಳಿ ಸೆಲ್ಫಿ ತೆಗೆಸಿಕೊಂಡರು. ಹಲವರು ವಿಡಿಯೊ ಮೂಲಕ ಅಪರೂಪದ ಕ್ಷಣವನ್ನು ಸೆರೆ ಹಿಡಿದರು. ಕಳೆದ 3 ವರ್ಷಗಳಿಂದ ತಿಮ್ಮಪ್ಪನ ದರ್ಶನಕ್ಕಾಗಿ ಬರುತ್ತಿರುವುದಾಗಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು 10 ಕೆಜಿ ಚಿನ್ನಾಭರಣ ಧರಿಸಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ತೆಲಂಗಾಣ ಓಲಿಂಪಿಕ್ ಅಸೋಸಿಯೇಶನ್‌ನ ಜಂಟಿ ಕಾರ್ಯದರ್ಶಿಯೂ ಆಗಿರುವ ವಿಜಯ್ ಕುಮಾರ್, ಚಿನ್ನದ ಮೇಲಿನ ಅಪಾರ ಆಸಕ್ತಿಯಿಂದಾಗಿ ಇಷ್ಟೊಂದು ಪ್ರಮಾಣದ ಆಭರಣ ಧರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಒಂದೆರಡು ಸರ ಧರಿಸಿದರೇನೆ ಕಳ್ಳರ ಭಯದಿಂದ ವಿಚಲಿತರಾಗುತ್ತೇವೆ. ಅಂತಹದರಲ್ಲಿ 5 ಕೆಜಿ ಬಂಗಾರ ಧರಿಸಿ ಓಡಾಡುವ ವಿಜಯ್ ಕುಮಾರ್‌ನ ಧೈರ್ಯ ಮೆಚ್ಚಬೇಕು ಎಂದು ನೆಟ್ಟಿಗರು ಹೇಳಿದ್ದಾರೆ. ನಿಜವಾಗಿಯೂ ಈತ ಬಂಗಾರದ ಮನುಷ್ಯ ಎಂದು ಹಲವರು ಉದ್ಘರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಭಾಷೆ ಬಾರದಿದ್ದರೆ ಏನಂತೆ? ಗೂಗಲ್ ಟ್ರಾನ್ಸ್‌ಲೇಟ್ ಇದ್ದರೆ ಸಾಕಲ್ವೇ? ಈ ಕ್ಯೂಟ್ ವಿಡಿಯೊಗೆ ನೆಟ್ಟಿಗರು ಫುಲ್ ಫಿದಾ