ಮುಂಬೈ: ಇತ್ತೀಚೆಗೆ ಗಗನಕ್ಕೇರಿದ್ದ ಬಂಗಾರದ ದರದಲ್ಲಿ ಕೆಲ ದಿನಗಳಿಂದ ಗಣನೀಯ ಇಳಿಕೆಯಾಗುತ್ತಿದೆ. ಅಕ್ಟೋಬರ್ 23ಕ್ಕೆ ಪ್ರತಿ ಹತ್ತು ಗ್ರಾಮ್‌ಗೆ 81,500 ರೂ. ಮಟ್ಟದಲ್ಲಿದ್ದ ಚಿನ್ನದ ದರ ಬುಧವಾರ ಬೆಳಗ್ಗೆ 75,210 ರೂ.ಗೆ ಇಳಿಕೆಯಾಗಿದೆ. (Gold price decline) ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ಇದೀಗ ಮಾರುಕಟ್ಟೆಯಲ್ಲಿ ಚರ್ಚೆ ನಡೆಯುತ್ತಿದೆ.
ಸಾಮಾನ್ಯವಾಗಿ ಹಬ್ಬದ ಸೀಸನ್ ಬಂದಾಗ ಬಂಗಾರಕ್ಕೆ ಸ್ಥಳೀಯವಾಗಿ ಬೇಡಿಕೆ ಹೆಚ್ಚುತ್ತದೆ. ಈಗ ಹಬ್ಬದ ಸೀಸನ್ ಮುಗಿದಿರುವುದರಿಂದ ಚಿನಿವಾರ ಪೇಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಮಂದಗತಿಯಲ್ಲಿದೆ. ಇದರಿಂದ ದರ ಇಳಿಕೆಯಾಗಿದೆ. ಎರಡನೆಯದಾಗಿ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಷೇರು ಸೇರಿದಂತೆ ಈಕ್ವಿಟಿ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಚಿನ್ನದ ಮೇಲಿನ ಹೂಡಿಕೆ ತುಸು ಇಳಿಕೆಯಾಗಿದೆ. ಇದು ಕೂಡ ದರ ಇಳಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಬಂಗಾರದ ದರದಲ್ಲಿ 0.5% ಇಳಿಕೆಯಾಗಿದ್ದು, 2671 ಡಾಲರ್‌ಗೆ ತಗ್ಗಿದೆ. ಹೂಡಿಕೆದಾರರು ಅಮೆರಿಕದ ಆರ್ಥಿಕತೆ ಕುರಿತ ಅಂಕಿ ಅಂಶಗಳಿಗೆ ಕಾಯುತ್ತಿದ್ದಾರೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕುರಿತು ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದು ಕೂಡ ನಿರ್ಣಾಯಕವಾಗಲಿದೆ. ಇದು ಬಂಗಾರದ ದರದ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅನಿಶ್ಚಿತತೆಯ ಸಂದರ್ಭ ಚಿನ್ನ ಅತ್ಯಂತ ಸುರಕ್ಷಿತ ಹೂಡಿಕೆಯ ಸಅಧನ ಎನ್ನಿಸಿತ್ತು. ಈಗ ಚುನಾವಣೆ ಮುಗಿದು ಅನಿಶ್ಚಿತತೆ ಅಂತ್ಯವಾಗಿರುವುದರಿಂದ ಬಂಗಾರದ ಮೇಲಿನ ಹೂಡಿಕೆಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ದರ ಇಳಿಯುತ್ತಿದೆ. ಡಾಲರ್ ಪ್ರಾಬಲ್ಯ ಸಾಧಿಸುತ್ತಿದೆ ಎನ್ನುತ್ತಾರೆ ತಜ್ಞರು.
ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ವಾರ ಡಾಲರ್ ಇಂಡೆಕ್ಸ್ ಏರುಗತಿಯನ್ನು ಆರಂಭಿಸಿತ್ತು. ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತಕ್ಕೀಡಾಗಿದೆ. ಭಾರತದಲ್ಲೂ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರು ಬುಕ್ ಪ್ರಾಫಿಟ್ ಮಾಡಿಕೊಳ್ಳುತ್ತಿದ್ದಾರೆ. ಇದು ಕೂಡ ದರ ಇಳಿಕೆಗೆ ಪ್ರಭಾವ ಬೀರಿದೆ.
ಚಿನ್ನದಲ್ಲಿ ಹೂಡಿಕೆಗೆ ಈಗ ಹಲವು ವಿಧಾನಗಳಿವೆ. ಭೌತಿಕವಾಗಿ ಚಿನ್ನದ ಅಭರಣಗಳು, ಗಟ್ಟಿ, ನಾಣ್ಯಗಳನ್ನು ಖರೀದಿಸುವುದು ಸಾಂಪ್ರದಾಯಿಕ ವಿಧಾನವಾಗಿದ್ದರೆ, ಡಿಜಿಟಲ್ ಗೋಲ್ಡ್ ಕೂಡ ಜನಪ್ರಿಯವಾಗುತ್ತಿದೆ. ಗೋಲ್ಡ್ ಇಟಿಎಫ್, ಸಾವರಿನ್ ಗೋಲ್ಡ್ ಬಾಂಡ್, ಗೋಲ್ಡ್ ಮ್ಯೂಚುವಲ್ ಫಂಡ್ ಸ್ಕೀಮ್ ಗಳೂ ಲಭ್ಯವಿದೆ. ಸಾವರಿನ್ ಗೋಲ್ಡ್ ಬಾಂಡ್ 2016-17ರ ಸಿರೀಸ್‌ನಲ್ಲಿ ಹೂಡಿಕೆ ಮಾಡಿದ್ದವರಿಗೆ ಮೌಲ್ಯ ಇಮ್ಮಡಿಗೂ ಹೆಚ್ಚು ಏರಿಕೆಯಾಗಿದೆ. 3,000 ರೂ. ಹೂಡಿಕೆ ಮಾಡಿದ್ದವರಿಗೆ 7,788 ರೂ. ಆದಾಯ ಲಭಿಸಿದೆ. ಹೂಡಿಕೆಯ ಮೌಲ್ಯದಲ್ಲಿ 168% ಏರಿಕೆಯಾಗಿದೆ. ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆಗೊಳಿಸುತ್ತದೆ. ಇದಕ್ಕೆ ಸರ್ಕಾರದ ಬೆಂಬಲವಿರುವುದರಿಂದ ಸುರಕ್ಷಿತ ಹೂಡಿಕೆಯ ಸಾಧನವಾಗಿದೆ. ಹೀಗಾಗಿ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಜನಪ್ರಿಯವಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Gold Price Today: ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್ ಚೆಕ್ ಮಾಡಿ